ನವದೆಹಲಿ: ಗರ್ಭಿಣಿ ಮಹಿಳೆಯರಿಗೆ ಪ್ರಕಟಿಸಿದ್ದ ಪರಿಷ್ಕೃತ ನೇಮಕಾತಿ ನೀತಿಯನ್ನು, ತೀವ್ರ ಟೀಕೆಗಳ ಬಳಿಕ ಎಸ್ ಬಿಐ ಹಿಂಪಡೆದಿದೆ.
ಇದಕ್ಕೂ ಮುನ್ನ ಎಸ್ ಬಿಐ ನ ಹೊಸ ನೀತಿಯಲ್ಲಿ ಮೂರು ತಿಂಗಳು ಹಾಗೂ ಅದಕ್ಕಿಂತ ಮೇಲ್ಪಟ್ಟ ಗರ್ಭಿಣಿ ಮಹಿಳೆಯರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿ ಹೆರಿಗೆಯಾದ ಬಳಿಕ ನಾಲ್ಕು ತಿಂಗಳ ನಂತರ ಬ್ಯಾಂಕ್ ಉದ್ಯೋಗಕ್ಕೆ ಸೇರಬಹುದು ಎಂಬ ನಿಬಂಧನೆಯನ್ನು ವಿಧಿಸಿತ್ತು.
ಈ ಪರಿಷ್ಕೃತ ನೀತಿಗೆ ಹಲವು ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು, ದೆಹಲಿ ಮಹಿಳಾ ಆಯೋಗದಿಂದ ತೀವ್ರ ವಿರೋಧ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ ಬಿಐ ಈ ನೀತಿಯನ್ನು ವಾಪಸ್ ಪಡೆದಿದೆ.
"ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ ಬಿಐ ಗರ್ಭಿಣಿ ಮಹಿಳೆಯರ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ನೀತಿಗಳನ್ನು ತಡೆಹಿಡಿದಿದ್ದು ಎಂದಿನ ನೀತಿಗಳನ್ನೇ ಪಾಲಿಸಲು ಸೂಚನೆ ನೀಡಿದೆ" ಎಂದು ಎಸ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.