ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಫೆಬ್ರವರಿ 10, ಬೆಳಗ್ಗೆ 7.00 ಗಂಟೆಯಿಂದ ಮಾರ್ಚ್ 7 ರ ಸಂಜೆ 6.30 ರವರೆಗೆ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಚುನಾವಣಾ ಆಯೋಗ ಶನಿವಾರ ನಿಷೇಧಿಸಿದೆ.
ಎಕ್ಸಿಟ್ ಪೋಲ್ ನಡೆಸುವುದು, ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅದರ ವರದಿ ಪ್ರಕಟಣೆ ಅಥವಾ ಅದರ ಪ್ರಚಾರವನ್ನು ಫೆಬ್ರವರಿ 10, ಬೆಳಗ್ಗೆ 7.00 ಗಂಟೆಯಿಂದ ಮಾರ್ಚ್ 7 ರ ಸಂಜೆ 6.30 ರವರೆಗೆ ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ಅಜಯ್ ಕುಮಾರ್ ಶುಕ್ಲಾ ಅವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.