ಕೊರೊನಾ ಕೇಸ್ ಜಗತ್ತಿನೆಲ್ಲಡೆ ಹೆಚ್ಚಾಗುತ್ತಿದೆ. ಇದೀಗ ವಿಶ್ವದ ಹಲವು ಭಾಗಗಳಲ್ಲಿ ಕೊರೊನಾ 3ನೇ ಅಲೆ ಉಂಟಾಗಿದೆ. ಭಾರತದಲ್ಲಿ ಕೊರನಾ ಕೇಸ್‌ಗಳು ಹೀಗೇ ಹೆಚ್ಚಾದರೆ 3ನೇ ಅಲೆ ಉಂಟಾಗುವ ಸಾಧ್ಯತೆ ಇದೆ. ಕೊರೊನಾವೈರಸ್ ತಡೆಗಟ್ಟಲು ನಾವೆಲ್ಲಾ ಈ ಹಿಂದೆ ಪಾಲಿಸಿದಂತೆ ಅಗ್ಯತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮ್ಮಲ್ಲಿ ಹೆಚ್ಚಿನವರು ಬಟ್ಟೆಯ ಮಾಸ್ಕ್ ಧರಿಸುತ್ತಿದ್ದೇವೆ, ಆದರೆ ಒಮಿಕ್ರಾನ್‌ನಂಥ ವೈರಸ್ ತಡೆಗಟ್ಟಲು ಬಟ್ಟೆ ಮಾಸ್ಕ್‌ನಿಂದ ಸಾಧ್ಯವೇ? ಈ ಕೊರೊನಾ ಸಮಯದಲ್ಲಿ ನಮ್ಮ ಸುರಕ್ಷತೆಗೆ ಮಾಸ್ಕ್ ಅನ್ನು ಯಾವ ರೀತಿ ಬಳಸಬೇಕು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ ನೋಡಿ:
ಬಟ್ಟೆಯ ಮಾಸ್ಕ್ ಪರಿಣಾಮಕಾರಿಯೇ? ಆರೋಗ್ಯ ತಜ್ಞರು ಹಾಗೂ ವಿಜ್ಞಾನಿಗಳು ಹೇಳುವ ಪ್ರಕಾರ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಅಷ್ಟೊಂದು ಪರಿಣಾಮಕಾರಿಯಲ್ಲ. ಅದರ ಬದಲಿಗೆ ಈ ಸಮಯದಲ್ಲಿ ಡಬಲ್ ಅಥವಾ ತ್ರಿಬಲ್ ಲೇಯರ್ ಮಾಸ್ಕ್ ಧರಿಸುವುದು ಸುರಕ್ಷಿತವಾಗಿದೆ. ಇದರಿಂದ ವೈರಸ್ ಹರಡುವುದನ್ನು ತಡೆಗಟ್ಟಬಹುದು. ಬಟ್ಟೆಯ ಮಾಸ್ಕ್ ಜೊತೆಗೆ ಸರ್ಜಿಕಲ್ ಮಾಸ್ಕ್ ಧರಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.ಡಬಲ್ ಲೇಯರ್ ಮಾಸ್ಕ್ ಆರೋಗ್ಯ ಪರಿಣಿತರು ಹೇಳುವ ಪ್ರಕಾರ ಬಟ್ಟೆಯ ಮಾಸ್ಕ್ ದೊಡ್ಡ ವೈರಸ್ ಕಣಗಳನ್ನು ತಡೆಗಟ್ಟುತ್ತೆ, ಆದರೆ ತುಂಬಾ ಸೂಕ್ಷ್ಮ ಕಣಗಳನ್ನು ತಡೆಗಟ್ಟಲು ಡಬಲ್ ಅಥವಾ ತ್ರಿಬಲ್ ಲೇಯರ್ ಮಾಸ್ಕ್ ಧರಿಸುವುದು ಸುರಕ್ಷಿತ. ಅದರಲ್ಲೂ ಒಮಿಕ್ರಾನ್ ತುಂಬಾ ವೇಗವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟಲು ಸುರಕ್ಷಿತ ಮಾಸ್ಕ್ ಅಂದರೆ ಡಬಲ್ ಅಥವಾ ತ್ರಿಬಲ್ ಲೇಯರ್ ಮಾಸ್ಕ್ ಬಳಸುವುದು ಒಳ್ಳೆಯದು.
ಸಿಡಿಸಿ ಏನು ಹೇಳುತ್ತದೆ? ಸಿಡಿಸಿ ಪ್ರಕಾರ ಎರಡು ವರ್ಷದ ಮಕ್ಕಳಿಂದ ಹಿಡಿದು ಡಬಲ್ ಡೋಸ್ ಲಸಿಕೆ ಪಡೆದಿರದ ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಡಬಲ್ ಲೇಯರ್ ಮಾಸ್ಕ್ ಧರಿಸಬೇಕು. ಮೊದಲು ಸರ್ಜಿಕಲ್ ಮಾಸ್ಕ್ ಧರಿಸಿ (ಯೂಸ್ ಅಂಡ್ ಥ್ರೋ) ನಂತರ ಬಟ್ಟೆ ಮಾಸ್ಕ್ ಧರಿಸಿ. ಅಲ್ಲದೆ ಬಟ್ಟೆ ಮಾಸ್ಕ್ ಅನ್ನು ಮನೆಗೆ ಬಂದ ತಕ್ಷಣ ತೊಳೆದು ಹಾಕಬೇಕು, ಸರ್ಜಿಕಲ್ ಮಾಸ್ಕ್ ಅನ್ನು ಒಂದು ಪೇಪರ್‌ನಲ್ಲಿ ಸುತ್ತಿ ಕಸದ ಬುಟ್ಟಿಗೆ ಹಾಕಿ, ಕೈಗಳನ್ನು ಸೋಪು ಹಾಕಿ ತೊಳೆಯಿರಿ.
N95 ಮಾಸ್ಕ್ ಬಳಸಬೇಕೆ? ನೀವು N95 ಮಾಸ್ಕ್ ಧರಿಸಬೇಕಾಗಿಲ್ಲ, ಅಲ್ಲದೆ N95 ಮಾಸ್ಕ್ ಅನ್ನು ದಿನವಿಡೀ ಧರಿಸಿ ಇರುವುದು ಕಷ್ಟ ಕೂಡ. ಈ ಮಾಸ್ಕ್ ವೈರಸ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಆದರೆ ದಿನ ಬಳಕೆಗೆ ಬೇಡ, ಇದನ್ನು ಆಸ್ಪತ್ರೆಯಲ್ಲಿಯಷ್ಟೇ ಬಳಸಿದರೆ ಸೂಕ್ತ, ಹೊರಗಡೆ ಓಡಾಡುವಾಗ ಸರ್ಜಿಕಲ್ ಮಾಸ್ಕ್ ಧರಿಸಿದರೆ ಸಾಕು. ಅಲ್ಲದೆ ಮುಖದಲ್ಲಿ ಗಡ್ಡ ಅಥವಾ ಉಸಿರಾಟದ ತೊಂದರೆ ಇರುವವರು ಇದನ್ನು ಬಳಸದಂತೆ ತಜ್ಞರು ಹೇಳುತ್ತಾರೆ. N95 ಮಾಸ್ಕ್ ಧರಿಸಿದಾಗ ತುಂಬಾ ಬಿಗಿಯಾಗಿರುವುದರಿಂದ ಉಸಿರಾಡಲು ಕೂಡ ಕಷ್ಟವಾಗುವುದು. ಆದ್ದರಿಂದ ಕೊರೊನಾ ತಡೆಗಟ್ಟಲು N95 ಮಾಸ್ಕ್ ಬೇಕಾಗಿಲ್ಲ, ಸಾಧಾರಣ ಮಾಸ್ಕ್ ಬಳಸಿ. ಡಬಲ್ ಅಥವಾ ತ್ರಿಬಲ್ ಲೇಯರ್ ಮಾಸ್ಕ್ ಧರಿಸಿ. ಎರಡು ಡೋಸ್ ಲಸಿಕೆ ಪಡೆಯಿರಿ.