ಲಂಡನ್: ಅಬುಧಾಬಿಯ ಭಾರತೀಯ ಮೂಲದ ಕೋಟ್ಯಾಧಿಪತಿ ಬಾವ ಗುತು ರಘುರಾಮ್ ಶೆಟ್ಟಿ ಅಲಿಯಾಸ್ ಬಿ ಆರ್ ಶೆಟ್ಟಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ವಿದೇಶಿ ವಿನಿಮಯ ವ್ಯವಹಾರ ವಹಿವಾಟಿನ ಭಾಗವಾಗಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ಗೆ ಪೂರ್ಣ ಮೊತ್ತ ಪಾವತಿಸಬೇಕೆಂದು ಲಂಡನ್ ಕೋರ್ಟ್ ಆದೇಶ ಹೊರಡಿಸಿದೆ. 131 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ರೂ 9,68,27,99,500) ಪಾವತಿಸಬೇಕಿದೆ.
2020 ರಲ್ಲಿ ಲಂಡನ್ ಬ್ಯಾಂಕ್ ಬಾರ್ಕ್ಲೇಸ್ ವಿದೇಶಿ ವಿನಿಮಯ ವ್ಯಾಪಾರ ವಹಿವಾಟು ಒಪ್ಪಂದದ ಭಾಗವಾಗಿ ಬಿ ಆರ್ ಶೆಟ್ಟಿ ಸದರಿ ಬ್ಯಾಂಕ್ ಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗಿತ್ತು. ಇದೇ ವಿಷಯವಾಗಿ ದುಬೈ ಕೋರ್ಟ್ ಬಿ.ಆರ್ ಶೆಟ್ಟಿ ವಿರುದ್ಧ ತೀರ್ಪು ನೀಡಿತ್ತು. ದುಬೈ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅವರು ಲಂಡನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಟನ್ ನ್ಯಾಯಾಲಯ ವಿಚಾರಣೆಯ ಸಂದರ್ಭದಲ್ಲಿ ಬಿ.ಆರ್.ಶೆಟ್ಟಿ ಪರ ವಕೀಲರು ತಮ್ಮ ಕಕ್ಷಿದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ತೀರ್ಪನ್ನು ಮುಂದೂಡಬೇಕು ಎಂದು ಕೋರಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2022ರ ಜನವರಿ 10ಕ್ಕೆ ಮುಂದೂಡಿತ್ತು.
ನಿನ್ನೆ ಮತ್ತೆ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ಬಿ.ಆರ್. ಶೆಟ್ಟಿ ಅವರ ಮನವಿಯನ್ನು ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ಬಾರ್ಕ್ಲೇಸ್ ಗೆ ಪಾವತಿಸಬೇಕಿರುವ, ತಮ್ಮ ಕಕ್ಷಿದಾರ ಬಿ.ಆರ್.ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ. ತೀರ್ಪನ್ನು ಮುಂದೂಡುವಂತೆ ಮತ್ತೊಮ್ಮೆ ನ್ಯಾಯಾಲಯವನ್ನು ಕೋರಿದರು. ಆದರೆ ಲಂಡನ್ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿದೆ . ಬಿ ಆರ್ ಶೆಟ್ಟಿ ಬ್ಯಾಂಕ್ ಬಾರ್ಕ್ಲೇಸ್‌ಗೆ 131 ಮಿಲಿಯನ್ ರೂ ಪಾವತಿಸಲು ಆದೇಶಿಸಿದೆ. ಜೊತೆಗೆ ಭಾರತ ಸೇರಿದಂತೆ ಇತರ ದೇಶಗಳು, ಲಂಡನ್ ನಲ್ಲಿರುವ ಬಿ.ಆರ್.ಶೆಟ್ಟಿ ಅವರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಪ್ರತಿನಿಧಿಗಳು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದಾರೆ.
ಯಾರು ಈ ಬಿ ಆರ್ ಶೆಟ್ಟಿ?
ಬಾವಗುತ್ತು ರಘುರಾಮ ಶೆಟ್ಟಿ (ಬಿಆರ್ ಶೆಟ್ಟಿ) ಐಷಾರಾಮಿ ಜೀವನಕ್ಕೆ ಮತ್ತೊಂದು ಹೆಸರು. ಇಲ್ಲದ ಆಸ್ತಿ ಇದೆ ಎಂದು ತೋರಿಸಿ ಐಷಾರಾಮಿ ಜೀವನ ಸಾಗಿಸುವಲ್ಲಿ ಅವರಿಗೆ ಅವರೇ ಸಾಟಿ ಎಂಬ ಆರೋಪಗಳಿವೆ. ಕರ್ನಾಟಕದ ಉಡುಪಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಮ್ಮ ಶೈಕ್ಷಣಿಕ ಅರ್ಹತೆಗಳೊಂದಿಗೆ ಫಾರ್ಮಾ ವಲಯದಲ್ಲಿ ಮಾರಾಟ ಪ್ರತಿನಿಧಿಯಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿ ಅಲ್ಲಿ ಫಾರ್ಮಸಿಯಲ್ಲಿ ಕ್ಲಿನಿಕಲ್ ಪದವಿ ಪಡೆದರು . ನಂತರ ಅವರು 1975 ರಲ್ಲಿ ಅಬುಧಾಬಿಯಲ್ಲಿ ತಮ್ಮದೇ ಆದ NMC ಹೆಲ್ತ್ ಹೆಸರಿನಲ್ಲಿ ಆಸ್ಪತ್ರೆಗಳ ನೆಟ್ ವರ್ಕ್ ಸ್ಥಾಪಿಸಿದರು. ಮುಂದಿನ ದಿನಗಳಲ್ಲಿ ಶತಕೋಟಿ ಆಸ್ತಿ ಸಂಪಾದಿಸಿದ್ದರು. 2019 ರಲ್ಲಿ ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ, ಅವರು ಭಾರತದ 42 ನೇ ಶ್ರೀಮಂತ ವ್ಯಕ್ತಿ, ಅಬುಧಾಬಿಯ ಐದನೇ ಶ್ರೀಮಂತ ಭಾರತೀಯರಲ್ಲಿ ಒಬ್ಬರು ಎಂದು ಹೇಳಿತ್ತು. ಪ್ರಸ್ತುತ 19 ದೇಶಗಳಲ್ಲಿ ಅವರಿಗೆ ಸೇರಿದ 194 ಆಸ್ಪತ್ರೆಗಳಿವೆ.