ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರ ಹಣದಿಂದ 'ಅಸಂಬದ್ಧ ಉಚಿತ ಕೊಡುಗೆ'ಗಳನ್ನು ನೀಡುವ ಭರವಸೆ ಅಥವಾ ಹಂಚುವ ರಾಜಕೀಯ ಪಕ್ಷದ ಚಿಹ್ನೆ ಮತ್ತು ಪಕ್ಷದ ನೋಂದಣಿ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದೆ.
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ, ಈ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಇದೊಂದು ಗಂಭೀರ ಸಮಸ್ಯೆಯಾಗಿದ್ದು ಉಚಿತ ಕೊಡುಗೆಗಳ ಬಜೆಟ್ ಎಂಬುದು ಸಾಮಾನ್ಯ ಬಜೆಟ್ ಅನ್ನೂ ಮೀರಿಸುವಂತಿದೆ. ಇದು ಭ್ರಷ್ಟಾಚಾರವಲ್ಲದಿದ್ದರೂ ಅಸಮಾನ ವೇದಿಕೆ ಸೃಷ್ಟಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹೇಳಿದ್ದಾರೆ.
ಅರ್ಜಿದಾರರು ಕೇವಲ ಕಾಂಗ್ರೆಸ್, ಶಿರೋಮಣಿ ಅಕಾಲಿದಳ ಹಾಗೂ ಎಎಪಿ ಪಕ್ಷಗಳನ್ನು ಮಾತ್ರ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿದೆ. ನೀವು ಅಫಿಡವಿಟ್‌ನಲ್ಲಿ ಇಬ್ಬರ ಹೆಸರನ್ನು ಮಾತ್ರ ಉಲ್ಲೇಖಿಸಿದ್ದೀರಿ ಎಂದು ಸಿಜೆಐ ಆಕ್ಷೇಪಿಸಿದರೆ ನ್ಯಾ. ಕೊಹ್ಲಿ ಅವರು "ನೀವು ನಿಮಗೆ ಬೇಕಾದಂತೆ ಆಯ್ಕೆ ಮಾಡಿಕೊಂಡಿದ್ದೀರಿ" ಎಂದರು.