ಚಳಿಗಾಲದಲ್ಲಿ ನಮ್ಮ ದೇಹವನ್ನು ಶೀತ ವಾತಾವರಣದಿಂದ ರಕ್ಷಿಸಿಕೊಳ್ಳಲು ಆರೋಗ್ಯಕರ ಆಹಾರ ತಿನ್ನಬೇಕು. ಅಂತಹ ಆಹಾರಗಳಲ್ಲಿ ಹಾಗಲಕಾಯಿಯೂ ಒಂದು. ಇದರ ಹೆಸರು ಹೇಳಿದಾಕ್ಷಣ ಹೆಚ್ಚಿನವರು ಮುಖ ಸೆಟೆದುಕೊಳ್ಳುತ್ತಾರೆ, ಕಾರಣ ಅದರ ಕಹಿ ರುಚಿ. ಆದರೆ, ಇದರ ಜ್ಯೂಸ್‌ನ್ನು ಚಳಿಗಾಲದಲ್ಲಿ ಸೇವಿಸುವುದರಿಂದ, ನೀವು ಊಹಿಸಿರದ ಪ್ರಯೋಜನಗಳು ನಿಮ್ಮ ಆರೋಗ್ಯಕ್ಕೆ ಲಭ್ಯವಾಗುತ್ತವೆ. ಹಾಗಾದರೆ, ಅದರ ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಹಾಗಲಕಾಯಿ ಜ್ಯೂಸ್ ಸೇವನೆಯ ಪ್ರಯೋಜನಗಳು ಮತ್ತು ಚಳಿಗಾಲದಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಕೆಳಗೆ ತಿಳಿಸಿದ್ದೇವೆ:
ರಕ್ತವನ್ನು ಶುದ್ಧೀಕರಿಸುವುದು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ದೇಹದ ರಕ್ತವನ್ನು ಅಚ್ಚುಕಟ್ಟಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಸ್ವಚ್ಛ ಮಾಡುತ್ತದೆ. ನಿಮ್ಮ ದೇಹದಲ್ಲಿ ರಕ್ತಕ್ಕೆ ಸ್ವಲ್ಪ ವಿಷಕಾರಿ ಅಂಶದಿಂದ ತುಂಬಿಕೊಂಡರೆ ಅದು ನಿಮ್ಮ ಸುಂದರವಾದ ಚರ್ಮದ ಮೇಲೆ ಮೊಡವೆಗಳು ಮತ್ತು ಗುಳ್ಳೆಗಳು ಉಂಟಾಗುವಂತೆ ಮಾಡುತ್ತದೆ. ಇದಕ್ಕೆ ಹಾಗಲಕಾಯಿ ಜ್ಯೂಸ್ ಉತ್ತಮವಾಗಿ, ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.
ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು: ಮಾನವ ದೇಹದಲ್ಲಿ ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುವ ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಪಾಲಿಪೆಪ್ಟೈಡ್ ಪಿ ಸಂಯುಕ್ತಗಳ ಉಪಸ್ಥಿತಿಯಿಂದಾಗಿ, ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆಯ ಮಟ್ಟಕ್ಕೆ ಒಳ್ಳೆಯದು. ಇದರ ಜೊತೆಯಲ್ಲಿ, ಇದು ಚರಂಟಿನ್ ಎಂಬ ಹೈಪೊಗ್ಲಿಸಿಮಿಕ್ ಏಜೆಂಟ್ ಅನ್ನು ಒಳಗೊಂಡಿದ್ದು, ಇದು ಯಕೃತ್ತು, ಸ್ನಾಯು ಮತ್ತು ಅಡಿಪೋಸ್ ಅಂಗಾಂಶದ ಜೀವಕೋಶಗಳಲ್ಲಿ ಗ್ಲೂಕೋಸ್ ಹೀರಿಕೊಳ್ಳುವಿಕೆ ಮತ್ತು ಗ್ಲೈಕೋಜೆನ್ ಸಂಶ್ಲೇಷಣೆಯನ್ನು ಹೆಚ್ಚಿಸುತ್ತದೆ. ಹಾಗಲಕಾಯಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಇದರ ಬೀಜಗಳು ಆಹಾರದ ಫೈಬರ್, ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿವೆ.ಇದರರ್ಥ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಒಳ್ಳೆಯದು.
ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುವುದು: ಹಾಗಲಕಾಯಿಯ ಸೇವನೆಯು ಅಂತಿಮವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ತಿನ್ನಲು ಕಹಿಯಾಗಿರುವ ಹಾಗಲಕಾಯಿ ಯಕೃತ್ತು ಸ್ನೇಹಿಯಾಗಿದೆ. ಇದು ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸುತ್ತದೆ ಮತ್ತು ಯಕೃತ್ತಿನಲ್ಲಿ ಆಲ್ಕೋಹಾಲ್ ನಿಕ್ಷೇಪಗಳನ್ನು ಕಡಿಮೆ ಮಾಡುತ್ತದೆ. ಇದು ವ್ಯವಸ್ಥೆಯನ್ನು ನೈಸರ್ಗಿಕವಾಗಿ ಶುದ್ಧೀಕರಿಸಿ, ಚಯಾಪಚಯ ದರವನ್ನು ಹೆಚ್ಚಿಸುವುದು. ಇದಲ್ಲದೆ, ಹಾಗಲಕಾಯಿಯು ಪಾಲಿಫಿನಾಲ್‌ಗಳಿಂದ ತುಂಬಿರುತ್ತದೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ತೂಕ ನಿರ್ವಹಣೆ: ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಹಾಗಲಕಾಯಿ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು. ಹಾಗಲಕಾಯಿಯಲ್ಲಿ ಸಹ ಹೆಚ್ಚಿನ ನೀರಿನ ಅಂಶ ಇರುವುದರಿಂದ, ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಉಂಟಾಗುವುದಿಲ್ಲ. ಅದು ಅಲ್ಲದೆ ತುಂಬಾ ಹೊತ್ತಿನವರೆಗೂ ಹೊಟ್ಟೆ ಹಸಿವು ಕೂಡ ಆಗುವುದಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರು ಹಾಗಲಕಾಯಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು: ಹಾಗಲಕಾಯಿ ರಸವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ನಂತಹ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗಲಕಾಯಿ ದೇಹದ ರಕ್ತದ ಒತ್ತಡವನ್ನು ಸಮತೋಲನದಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಪೊಟ್ಯಾಸಿಯಮ್ ನಲ್ಲಿ ಹೆಚ್ಚಿನ ಮಟ್ಟದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚಿನ ಸೋಡಿಯಂ ಅನ್ನು ಸಹ ಹೀರಿಕೊಳ್ಳುತ್ತದೆ.
ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ: ಮೊದಲಿಗೆ ಹಾಗಲಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. ನಂತರ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅದರ ತೊಗಟೆ ಮತ್ತು ಬೀಜಗಳನ್ನು ಹೊರಗೆ ತೆಗೆಯಿರಿ. ತದನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿಕೊಳ್ಳಿ, ಹಾಗೂ ಇದಕ್ಕೆ ಅರ್ಧ ಟೀ ಚಮಚ ಉಪ್ಪು ಸೇರಿಸಿ, ಹಾಗೂ ಈಗಾಗಲೇ ಕತ್ತರಿಸಿ ಇಟ್ಟುಕೊಂಡಿದ್ದ ಹಾಗಲಕಾಯಿಯನ್ನು 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಹಾಗಲಕಾಯಿತುಂಡುಗಳನ್ನು ತೆಗೆದುಕೊಂಡು ಮಿಕ್ಸರ್ ಗೆ ಹಾಕಿ. ಈಗ ಅದಕ್ಕೆ ನೀರು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ರುಬ್ಬಿಕೊಂಡರೆ, ಜ್ಯೂಸ್ ಸಿದ್ಧ.