ನವದೆಹಲಿ: ಚೀನೀಯರು ಸೇನೆಯ ಪ್ರಮಾಣವನ್ನು ಹೆಚ್ಚಿಸಿದ್ದಾರೆ ಮತ್ತು ಶಾಶ್ವತ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದು, ಅವರು ಶಾಶ್ವತವಾಗಿ ಅಲ್ಲಿಗೆ ಉಳಿಯುತ್ತಾರೆಯೇ ಅಥವಾ ಅವರು ಹೊರಹೋಗುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಬುಧವಾರ ಹೇಳಿದ್ದಾರೆ.
ಪೂರ್ವ ಲಡಾಖ್ ನ ಸೇನಾ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಭಾರತ ಮತ್ತು ಚೀನಾ ಇಂದಿನಿಂದ 14ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಆರಂಭಿಸಿವೆ. ಮಾತುಕತೆ ಬಳಿಕ ಮಾತನಾಡಿದ ನರವಾಣೆ ಅವರು, ಅಗತ್ಯವಿರುವಷ್ಟು ಕಾಲ ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಉಳಿಯಲು ನಾವು ಸಿದ್ಧರಾಗಬೇಕು ಎಂದರು.
ಚೀನಿ ಪಿಎಲ್‌ಎ ಶಾಶ್ವತ ನಿಯೋಜನೆಗೆ ತಯಾರಿ ನಡೆಸುತ್ತಿದೆಯೇ? ಎಂಬ ದಿ ನ್ಯೂ ಇಂಡಿಯನ್ ಎಕ್ಸ್ ಪ್ರಶ್ನೆಗೆ ಉತ್ತರಿಸಿದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು, "ಪೂರ್ವ ಲಡಾಖ್‌ನಲ್ಲಿ ಚೀನೀಯರಿಂದ ದೊಡ್ಡ ಪಡೆಗಳನ್ನು ಜಮಾವಣೆ ಮಾಡಲಾಗಿದೆ ಮತ್ತು ಅವರು ಸಾಕಷ್ಟು ಮೂಲಸೌಕರ್ಯಗಳನ್ನು ಮಾಡಿರುವುದರಿಂದ ಅವರು ಶಾಶ್ವತವಾಗಿ ಅಲ್ಲಿ ತಮ್ಮನ್ನು ತಾವು ಬಂಧಿಸಿಕೊಳ್ಳುತ್ತಾರೆಯೇ ಅಥವಾ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಡಿ-ಇಂಡಕ್ಷನ್‌ಗೆ ಅವರು ಒಲವು ತೋರುತ್ತಾರೆಯೇ ಎಂದು ನೋಡಬೇಕಾಗಿದೆ ಎಂದರು.
ನಾವು ಚೀನಾ ಸೇನೆಯೊಂದಿಗೆ ದೃಢ ಮತ್ತು ಸ್ಥಿರ ನಿರ್ಣಯದ ರೀತಿಯಲ್ಲಿ ವ್ಯವಹರಿಸುವುದನ್ನು ಮುಂದುವರಿಸಿದ್ದೇವೆ. ಈ ಪ್ರದೇಶದಲ್ಲಿ ಅತ್ಯುನ್ನತ ಮಟ್ಟದ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂದು ನರವಾಣೆ ಅವರು ಹೇಳಿದ್ದಾರೆ.
ಪರಸ್ತರ ಸೇನೆ ಹಿಂಪಡೆದುಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದ್ದು, ಪಾಸಿಟಿವ್ ಬೆಳವಣಿಗೆಗಳು ಕಂಡುಬಂದಿವೆ. ಆದರೆ ಬೆದರಿಕೆ ಯಾವುದೇ ರೀತಿಯಲ್ಲೂ ಕಡಿಮೆಯಾಗಿಲ್ಲ. ಪೆಟ್ರೋಲಿಂಗ್ ಪಾಯಿಂಟ್ 15 (ಹಾಟ್ ಸ್ಪ್ರಿಂಗ್ಸ್) ನಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನಾವು ಹೊಂದಿದ್ದೇವೆ. ಯಾವುದೇ ಮಿಲಿಟರಿ ಪರಿಣಾಮಗಳಿದ್ದಲ್ಲಿ ಅದನ್ನು ಎದುರಿಸಲು ನಾವು ಸಾಕಷ್ಟು ಸಿದ್ಧರಿದ್ದೇವೆ ಎಂದು ನರವಾಣೆ ತಿಳಿಸಿದ್ದಾರೆ.