ಪ್ಯಾರಿಸ್: ವಿಶ್ವದಲ್ಲಿ ಓಮಿಕ್ರಾನ್ ಆರ್ಭಟ ಮುಂದುವರಿದಿರುವಾಗಲೇ ಅದಕ್ಕಿಂತಲೂ ಅಪಾಯಕಾರಿಯಾದ ಮತ್ತೊಂದು ರೂಪಾಂತರಿಯನ್ನು ಫ್ರಾನ್ಸ್ ನಲ್ಲಿ ಪತ್ತೆ ಹಚ್ಚಲಾಗಿದೆ. ಐಹೆಚ್ ಯು ( ಬಿ. 1. 640.2) ಎಂದು ಕರೆಯಲಾಗುತ್ತಿರುವ ಹೊಸ ರೂಪಾಂತರಿಯನ್ನು ಫ್ರಾನ್ಸ್ ವಿಜ್ಞಾನಿಗಳು ಕಂಡುಹಿಡಿದಿದ್ದು, ಈ ಸೋಂಕಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.
ಫ್ರಾನ್ಸ್ ನ ಮಾರ್ಸಿಲೆ ನಗರದಲ್ಲಿ ಪ್ರಸ್ತುತ 12 ಪ್ರಕರಣಗಳು ದೃಢಪಟ್ಟಿವೆ. ಅವರೆಲ್ಲರೂ ದಕ್ಷಿಣ ಆಫ್ರಿಕಾದ ಕ್ಯಾಮರೂನ್ ದೇಶದಿಂದ ಬಂದವರು ಎನ್ನಲಾಗಿದೆ. ಈ ರೂಪಾಂತರದಲ್ಲಿ 46 ಹೊಸ ರೂಪಾಂತರಿಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಇದು ಓಮಿಕ್ರಾನ್ ಸೋಂಕಿಗಿಂತಲೂ ಹೆಚ್ಚು ವೇಗವಾಗಿ ಹರಡುತ್ತದೆ. ಲಸಿಕೆ ನೀಡಿದರೂ ಸಹ ಪ್ರಯೋಜನವಿಲ್ಲ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಹೊಸ ರೂಪಾಂತರ ಇತರ ದೇಶಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ವೆರಿಯಂಟ್ ಅಂಡರ್ ಇನ್ವೆಸ್ಟಿಗೇಶನ್ ಪಟ್ಟಿಗೆ ಸೇರಿಸಲಾಗಿದೆ. ರೂಪಾಂತರದಲ್ಲಿರುವ ಹಾರ್ನ್ ಪ್ರೊಟೀನ್ ಗಳು ಎನ್ 501ವೈ ಮತ್ತು ಇ484ಕೆ ಸೇರಿದಂತೆ 14 ಬದಲಾವಣೆಗಳಿಗೆ ಒಳಗಾಗಿವೆ ಮತ್ತು ಕೊರೋನಾ ವೈರಸ್ ನಲ್ಲಿರುವ ಇತರ 9 ಅಮೈನೋ ಆಮ್ಲಗಳನ್ನು ಹೊಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆದಾಗ್ಯೂ, ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂದು ಪ್ರಮುಖ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್ ಫೀಲ್ ಡಿಂಗ್ ಹೇಳುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು, ಹೊಸ ರೂಪಾಂತರಿ ಎಷ್ಟು ಅಪಾಯಕಾರಿ ಎಂಬುದನ್ನು ಕಂಡುಹಿಡಿಯಲು ಇನ್ನೂ ಕೆಲವು ವರ್ಷಗಳು ಬೇಕಾಗುತ್ತವೆ ಎಂದು ಅವರು ತಿಳಿಸಿದ್ದಾರೆ.