ವಾಲಯರ್: ಆರ್ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರದ ಕಹಿ ಅನುಭವವನ್ನು ಬಹುತೇಕರು ಅನುಭವಿಸೇ ಇರುತ್ತಾರೆ. ಅದರಲ್ಲೂ ಆರ್ಟಿಒ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಲಂಚಾವತಾರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇತ್ತೀಚೆಗೆ ಲಂಚಬಾಕರ ಮೇಲಿನ ದಾಳಿಗಳ ಸಂಖ್ಯೆಯು ಕೂಡ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳ ಲಂಚ ತೆಗೆದುಕೊಳ್ಳುವ ವಿಧಾನವನ್ನು ಬದಲಿಸಿದ್ದಾರೆ.
ಕೇರಳದ ಆರ್ಟಿಒ ಅಧಿಕಾರಿಗಳ ವಿನೂತನ ಲಂಚ ಪ್ರಕರಣ ಬಯಲಾಗಿದೆ. ವಾಲಯರ್ನ ಆರ್ಟಿಒ ಚೆಕ್ ಪೋಸ್ಟ್ ಮೇಲೆ ಕೇರಳ ವಿಜಿಲೆನ್ಸ್ ಅಧಿಕಾರಿಗಳು ದಾಳಿ ಮಾಡಿದಾಗ ಆರ್ಟಿಒ ಅಧಿಕಾರಿಗಳು ತರಕಾರಿ ಮತ್ತು ಹಣ್ಣಿನ ರೂಪದಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಣದ ಬದಲಾಗಿ ಕುಂಬಳಕಾಯಿ ಮತ್ತು ಕಿತ್ತಳೆ ಹಣ್ಣು ಸೇರಿದಂತೆ ಇತರೆ ರೂಪದಲ್ಲಿ ಲಂಚ ಪಡೆಯುತ್ತಿದ್ದಾರೆ. ದಾಳಿಯ ವೇಳೆ 67 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.
ಲಾರಿಗಳಲ್ಲಿ ಬರುವ ವಸ್ತುಗಳನ್ನು ಲಂಚವಾಗಿ ಪಡೆದುಕೊಳ್ಳುವ ಆರ್ಟಿಒ ಅಧಿಕಾರಿಗಳು ಅದನ್ನು ಹಂಚಿಕೊಳ್ಳುತ್ತಾರೆ. ಇದಕ್ಕೂ ಮುನ್ನ ಹಣವನ್ನು ಮಾತ್ರ ಲಂಚವನ್ನಾಗಿ ಸ್ವೀಕರಿಸುತ್ತಿದ್ದರು. ಆದರೆ, ವಿಜಿಲೆನ್ಸ್ ಅಧಿಕಾರಗಳು ವಾಲಯರ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳ ಮತ್ತೊಂದು ಮುಖ ಬಯಲಾಗಿದೆ.
ದಾಳಿಯ ವೇಳೆ ಚೆಕ್ಪೋಸ್ಟ್ ಆಫೀಸ್ನಲ್ಲಿದ್ದ ಮೋಟಾರು ವಾಹನ ಇನ್ಸ್ಪೆಕ್ಟರ್ ಬಿನೋಯ್, ಸ್ಥಳದಿಂದ ಕಾಲ್ಕಿತ್ತಿದ್ದು, ಆತನಿಗಾಗಿ ವಿಜಿಲೆನ್ಸ್ ತಂಡ ಶೋಧ ಕಾರ್ಯ ನಡೆಸುತ್ತಿದೆ. ದಾಳಿಯ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಕೊಂಡು ಐವರು ಸಿಬ್ಬಂದಿ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ.