ನವದೆಹಲಿ: ಮುಂದಿನ ಎರಡು ವಾರ ಭಾರತಕ್ಕೆ ನಿರ್ಣಾಯಕವಾಗಿದ್ದು, ಇಡೀ ದೇಶವನ್ನು ಕೊರೊನಾ ವೈರಸ್ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಸರ್ಕಾರವನ್ನು ಎಚ್ಚರಿಸಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊವೀಡ್ ಪ್ರಕರಣಗಳ ಬಗ್ಗೆ ಮಾತನಾಡಿರುವ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್, ಭಾರತಕ್ಕೆ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ, ಎರಡನೇ ಅಲೆಗಿಂತ ಮೂರನೇ ಅಲೆ ಅತ್ಯಂತ ವೇಗವಾಗಿದೆ ಎಂದು ಹೇಳಿದ್ದಾರೆ.ಹೀಗಾಗಿ ಮುಂದಿನ ಎರಡು ವಾರದಲ್ಲಿ ಭಾರಿ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಲಿದೆ ಎಂದು ಸೌಮ್ಯ ಸ್ವಾಮಿನಾಥನ್ ಭವಿಷ್ಯ ನುಡಿದಿದ್ದು, ಸೋಂಕು ಏಕಾಏಕಿ ಹೆಚ್ಚುತ್ತಿರುವ ಹಿನ್ನಲೆ ನಿಯಂತ್ರಣಕ್ಕಾಗಿ ಪರೀಕ್ಷೆ ಹೆಚ್ಚಿಸಲು ಅವರು ಸಲಹೆ ನೀಡಿದ್ದಾರೆ.
ಓಮಿಕ್ರಾನ್ ಸಾಮಾನ್ಯ ಶೀತವೆಂದು, ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇಲ್ಲ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಎರಡು ವಾರದ ಬಳಿಕ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಬಹುದು, ರೋಗಿಗಳನ್ನು ಪರೀಕ್ಷಿಸಲು, ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಸಾಕಾಗದಿರಬಹುದು ಹೀಗಾಗಿ ಈಗಿನಿಂದಲೇ ಎಚ್ಚರಿಕೆ ವಹಿಸಿ ವ್ಯವಸ್ಥಿತ ತಯಾರಿಯಲ್ಲಿರುವಂತೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. 14 ದಿನ ಕ್ವಾರಂಟೈನ್ ಕಡ್ಡಾಯ ಕೋವಿಡ್- 19 ಸೋಂಕಿತರು 7 ದಿನಗಳಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರೂ ಕೂಡ 14 ದಿನ ಕ್ವಾರಂಟೈನ್ ಕಡ್ಡಾಯವಾಗಿ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪುನರುಚ್ಚರಿಸಿದೆ.
ಈಗಾಗಲೇ ಕೋವಿಡ್-19 ಸೋಂಕಿತರು 7 ದಿನಗಳಲ್ಲಿ ಹುಷಾರಾಗಿ ಕ್ವಾರಂಟೈನ್‍ನಿಂದ ಹೊರಬಂದು ಎಲ್ಲಾ ಕಡೆ ಹೋಗುತ್ತಾರೆ ಇದರಿಂದ ಕೋವಿಡ್ ಸೋಂಕಿತನ ದೇಹದಲ್ಲಿದ್ದ ಅಲ್ಪಪ್ರಮಾಣದ ಸೋಂಕಿನ ಅಂಶ ಕೊರೊನಾ ಹರಡಲು ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ WHO ಕೋವಿಡ್- 19 ನಿರ್ವಹಣಾ ತಂಡದ ಸದಸ್ಯ ಅಬ್ಬಿ ಮೊಹಮ್ಮದ್, ದೇಶದಲ್ಲಿ ಕೊರೊನಾ ಸೊಂಕಿತರು 7 ದಿನಗಳಲ್ಲಿ ಚೇತರಿಕೆ ಹೊಂದುತ್ತಾರೆ. ಆದರೆ ಅವರ ದೇಹದಲ್ಲಿ ಅಲ್ಪಪ್ರಮಾಣದ ವೈರಾಣು ಉಳಿದುಕೊಂಡಿರುತ್ತದೆ. ಆದರೆ 14 ದಿನಗಳ ಕಾಲ ಕ್ವಾರಂಟೈನ್ ಹೊಂದಿದರೆ ಸೋಂಕಿತ ಪೂರ್ಣ ಪ್ರಮಾಣದಲ್ಲಿ ಸರಿಹೊಂದುತ್ತಾರೆ. ಇದರಿಂದ ಸೋಂಕಿನ ಹರಡುವಿಕೆ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಕೊರೊನಾ ವಿಶ್ವವ್ಯಾಪಿ ಮತ್ತೆ ಸದ್ದು ಮಾಡುತ್ತಿದೆ. ಭಾರತದಲ್ಲಿ ಕೊರೊನಾ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್-19 ಪ್ರಕರಣಗಳು ವರದಿ ಆಗಿದೆ. ಜೊತೆಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 2,135ಕ್ಕೂ ಹೆಚ್ಚು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.