ನವದೆಹಲಿ:ಸೆಮಿಕಂಡಕ್ಟರ್ ಕೊರತೆಯ ನಡುವೆ ಕಂಪನಿಗಳ ಉತ್ಪಾದನಾ ನಷ್ಟ ಮುಂದುವರಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2022 ಜನವರಿಯಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟ ಶೇ.10ರಷ್ಟು ಕುಸಿದಿದೆ ಎಂದು ಫೆಡರೇಷನ್ ಆಫ್ ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
ನವದೆಹಲಿ:ಸೆಮಿಕಂಡಕ್ಟರ್ ಕೊರತೆಯ ನಡುವೆ ಕಂಪನಿಗಳ ಉತ್ಪಾದನಾ ನಷ್ಟ ಮುಂದುವರಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2022 ಜನವರಿಯಲ್ಲಿ ಪ್ರಯಾಣಿಕ ವಾಹನಗಳ ಚಿಲ್ಲರೆ ಮಾರಾಟ ಶೇ.10ರಷ್ಟು ಕುಸಿದಿದೆ ಎಂದು ಫೆಡರೇಷನ್ ಆಫ್ ಆಟೊಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
2021, ಜನವರಿಯಲ್ಲಿ 2,87,424 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ 2022 ಜನವರಿಯಲ್ಲಿ 2,58,329 ವಾಹನಗಳು ಮಾರಾಟವಾಗಿದ್ದು,ಶೇ.10ರಷ್ಟು ಕುಸಿತವುಂಟಾಗಿದೆ. ಬೇಡಿಕೆ ಉತ್ತಮವಾಗಿದ್ದರೂ ಸೆಮಿಕಂಡಕ್ಟರ್ ಕೊರತೆಯಿಂದಾಗಿ ಕಂಪನಿಗಳಿಗಳಿಗೆ ಸಾಕಷ್ಟು ದಾಸ್ತಾನು ಹೊಂದಿರಲು ಸಾಧ್ಯವಾಗುತ್ತಿಲ್ಲ ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ ಗುಲಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2021, ಜನವರಿಯಲ್ಲಿ 11,75,832 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ 2022, ಜನವರಿಯಲ್ಲಿ ಶೇ.13.44ರಷ್ಟು ಕುಸಿತ ಕಂಡಿದ್ದು, 10,17,785 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಬೆಲೆಏರಿಕೆ ಮತ್ತು ಒಮೈಕ್ರಾನ್ ಬಿಕ್ಕಟ್ಟು ಗ್ರಾಮೀಣ ಜನರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದ್ದು, ದ್ವಿಚಕ್ರ ವಾಹನಗಳ ಮಾರಾಟ ಕುಸಿಯಲು ಕಾರಣವಾಗಿದೆ ಎಂದು ಗುಲಾಟಿ ತಿಳಿಸಿದರು.
ಇದೇ ರೀತಿ 2021, ಜನವರಿಯಲ್ಲಿ 61,485 ಟ್ರಾಕ್ಟರ್ಗಳು ಮಾರಾಟವಾಗಿದ್ದರೆ,ಕಳೆದ ತಿಂಗಳು ಇದು 55,421ಕ್ಕೆ ಇಳಿದಿದೆ (ಶೇ.9.86 ಕುಸಿತ).
ಆದಾಗ್ಯೂ ಕಳೆದ ತಿಂಗಳು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ. 2021, ಜನವರಿಯಲ್ಲಿ ಮಾರಾಟವಾಗಿದ್ದ 56,227 ವಾಹನಗಳಿಗೆ ಹೋಲಿಸಿದರೆ 2022, ಜನವರಿಯಲ್ಲಿ 67,763 ವಾಹನಗಳು ಮಾರಾಟವಾಗಿದ್ದು,ಶೇ.20.52ರಷ್ಟು ಹೆಚ್ಚಳವಾಗಿದೆ.
ತ್ರಿಚಕ್ರ ವಾಹನಗಳ ಮಾರಾಟದಲ್ಲಿಯೂ ಏರಿಕೆಯಾಗಿದೆ. 2021, ಜನವರಿಯಲ್ಲಿ 31,162 ವಾಹನಗಳು ಮಾರಾಟವಾಗಿದ್ದರೆ ಕಳೆದ ತಿಂಗಳು ಈ ಸಂಖ್ಯೆ 40,449ಕ್ಕೆ ಹೆಚ್ಚಿದೆ (ಶೇ.29.8 ಏರಿಕೆ).
ಎಲ್ಲ ವರ್ಗಗಳ ವಾಹನಗಳು ಸೇರಿದಂತೆ ಒಟ್ಟು ಮಾರಾಟ ಸಂಖ್ಯೆ ಕಳೆದ ಜನವರಿಯಲ್ಲಿ 14,39,747 ಆಗಿದ್ದು,ಇದು 2021ರ ಮಾರಾಟ (15,12,130)ಕ್ಕೆ ಹೋಲಿಸಿದರೆ ಶೇ.10.69ರಷ್ಟು ಇಳಿಕೆಯಾಗಿದೆ. ಒಮೈಕ್ರಾನ್ ಅಲೆ ದುರ್ಬಲಗೊಳ್ಳುತ್ತಿದ್ದು, ಸೆಮಿಕಂಡಕ್ಟರ್ ಕೊರತೆಯೂ ಸುಧಾರಿಸುವ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ವಾಹನಗಳ ಚಿಲ್ಲರೆ ಮಾರಾಟ ಕ್ರಮೇಣ ಹೆಚ್ಚಲಿದೆ ಎಂದು ಗುಲಾಟಿ ಹೇಳಿದರು.