ನವದೆಹಲಿ:ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಇಲ್ಲಿಯ ತನಕ ರೂ 1000 ಕೋಟಿ ಮೌಲ್ಯದ ಡ್ರಗ್ಸ್, ಮದ್ಯ, ಉಚಿತ ಉಡುಗೊರೆಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಹೋಲಿಸಿದಾಗ ಈ ಬಾರಿ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ನಾಲ್ಕು ಪಟ್ಟು ಅಧಿಕವಾಗಿದೆ.
ಪಂಜಾಬ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಈ ರಾಜ್ಯದಲ್ಲಿ ರೂ 510.91 ಕೋಟಿ ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ, ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (ರೂ 307.92 ಕೋಟಿ), ಮಣಿಪುರ (ರೂ 167.83 ಕೋಟಿ, ಉತ್ತರಾಖಂಡ (ರೂ 18.81 ಕೋಟಿ) ಮತ್ತು ಗೋವಾ (ರೂ 12.73 ಕೋಟಿ) ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಇಲ್ಲಿಯ ತನಕ ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ರೂ 1,018 ಕೋಟಿಗೂ ಹೆಚ್ಚಾಗಿದೆ. 2017 ಚುನಾವಣೆ ವೇಳೆ ರೂ 299.84 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಬಾರಿ ವಶಪಡಿಸಿಕೊಳ್ಳಲಾದ ನಗದಿನ ಪ್ರಮಾಣ ರೂ 140.29 ಕೋಟಿ ಆಗಿದ್ದರೆ, ರೂ 99.84 ಕೋಟಿ ಮೌಲ್ಯದ 82 ಲಕ್ಷ ಲೀಟರ್ ಮದ್ಯ ರೂ 569.52 ಕೋಟಿ ಮೌಲ್ಯದ ಡ್ರಗ್ಸ್, ರೂ 115.054 ಕೋಟಿ ಮೌಲ್ಯದ ಬೆಲೆಬಾಳುವ ಲೋಹಗಳು ಹಾಗೂ ರೂ 93.5 ಕೋಟಿ ಮೌಲ್ಯದ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್‍ನಲ್ಲಿ ರೂ 109 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದರೆ ಉತ್ತರ ಪ್ರದೇಶದಲ್ಲಿ 8 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.