ನವದೆಹಲಿ: ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಉದ್ದೇಶದ 100 ಡ್ರೋನ್‌ಗಳಿಗೆ ವಿವಿಧ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.
ಕೃಷಿ ಕ್ಷೇತ್ರಕ್ಕೆ 'ಕಿಸಾನ್ ಡ್ರೋನ್'ಗಳನ್ನು ಪರಿಚಯಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.
ಮಾನೇಸರ್‌ನಲ್ಲಿ ಆಯೋಜಿಸಲಾದ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಈಗಾಗಲೇ ಡ್ರೋನ್‌ಗಳನ್ನು ಬಳಸುತ್ತಿರುವ ವಿವಿಧ ಕ್ಷೇತ್ರಗಳನ್ನು ಭಾಷಣದಲ್ಲಿ ಉಲ್ಲೇಖಿಸಿದರು. ಗಣರಾಜ್ಯೋತ್ಸವ ಸಮಾರಂಭದ ನಂತರ ನಡೆಯುವ ಬೀಟಿಂಗ್ ರಿಟ್ರೀಟ್ ಸಮಯದಲ್ಲಿ ಪ್ರದರ್ಶಿಸಲಾದ 1,000 ಡ್ರೋನ್‌ಗಳನ್ನು ಅವರು ಉದಾಹರಣೆಯಾಗಿ ನೀಡಿದರು. 'ಸ್ವಾಮಿತ್ವ' ಯೋಜನೆಯ ಅಡಿಯಲ್ಲಿ ಭೂ ದಾಖಲೆಗಳನ್ನು ಸಮೀಕ್ಷೆ ಮಾಡಿ ಮತ್ತು ದಾಖಲಿಕರಣ ಮಾಡಲಾಗುತ್ತದೆ. ದೂರದ ಪ್ರದೇಶಗಳಿಗೆ ಡ್ರೋನ್ ಮೂಲಕ ಔಷಧಿಗಳು, ಲಸಿಕೆಗಳನ್ನು ಪೂರೈಸಲಾಗುತ್ತದೆ ಎಂದು ಅವರು ತಿಳಿಸಿದರು.
'ಡ್ರೋನ್‌ಗಳ ಮೂಲಕ ರಸಗೊಬ್ಬರಗಳ ಸಿಂಪಡಣೆಯನ್ನು ಸಹ ಮಾಡಲಾಗುತ್ತಿದೆ. 'ಕಿಸಾನ್ ಡ್ರೋನ್‌ಗಳು' ಹೊಸ ಯುಗದ ಕ್ರಾಂತಿಯಾಗಲಿವೆ. ಶೀಘ್ರದಲ್ಲೇ, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳು ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸಲು ರೈತರಿಗೆ ನೆರವಾಗಲಿವೆ. ಮೀನುಗಾರರು ತಾಜಾ ಮೀನುಗಳನ್ನು ಮಾರುಕಟ್ಟೆಗೆ ತಲುಪಿಸಬಹುದು' ಎಂದು ಮೋದಿ ತಿಳಿಸಿದರು.
'ಇಂತಹ ಸಾಕಷ್ಟು ಅವಕಾಶಗಳು ನಮ್ಮ ಬಾಗಿಲನ್ನು ತಟ್ಟುತ್ತಿವೆ. ದೇಶದ ಇತರ ಹಲವು ಕಂಪನಿಗಳು ಈ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ' ಎಂದೂ ಮೋದಿ ಹರ್ಷ ವ್ಯಕ್ತಪಡಿಸಿದರು.
'ಭಾರತವು ಡ್ರೋನ್ ಸ್ಟಾರ್ಟ್‌ಅಪ್‌ಗಳಿಗಾಗಿ ಪೂರಕ ವ್ಯವಸ್ಥೆ ಹೊಂದಿವೆ. ಭಾರತವು ಈ ಕ್ಷೇತ್ರದಲ್ಲಿ ಜಗತ್ತನ್ನು ಮುನ್ನಡೆಸುತ್ತದೆ ಎಂದು ನನಗೆ ಖಚಿತವಾಗಿದೆ' ಎಂದೂ ಅವರು ಹೇಳಿದರು.
ಇದು ಡ್ರೋನ್ ವಲಯದಲ್ಲಿ ಹೊಸ ಮೈಲುಗಲ್ಲು ಮಾತ್ರವಲ್ಲ. ಹಲವು ಹೊಸ ಸಾಧ್ಯತೆಗಳನ್ನು ಇದು ಹುಟ್ಟುಹಾಕಿದೆ. 'ಗರುಡ್ ಏರೋಸ್ಪೇಸ್ ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಡ್ರೋನ್‌ಗಳನ್ನು ತಯಾರಿಸಲು ನಿರ್ಧರಿಸಿದೆ. ಇದು ನೂರಾರು ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ನೀಡಲಿದೆ,' ಎಂದು ಅವರು ಹೇಳಿದರು.