ನವದೆಹಲಿ:ಪಿಎಂ ಕೇರ್ಸ್ ನಿಧಿಯಲ್ಲಿ 2020,ಮಾರ್ಚ್‌ನಲ್ಲಿ ಅದು ಸ್ಥಾಪನೆಯಾದಾಗಿನಿಂದ 2021,ಮಾರ್ಚ್‌ವರೆಗೆ 10,990 ಕೋ.ರೂ.ಗಳು ಸಂಗ್ರಹವಾಗಿದ್ದು,ಅದು 2020-21ನೇ ಹಣಕಾಸು ವರ್ಷದಲ್ಲಿ 3,976 ಕೋ.ರೂ.ಗಳನ್ನು ವೆಚ್ಚ ಮಾಡಿದೆ. 2021,ಮಾ.31ಕ್ಕೆ ಇದ್ದಂತೆ ನಿಧಿಯಲ್ಲಿ 7,044 ಕೋ.ರೂ.ಗಳ ಶಿಲ್ಕು ಉಳಿದುಕೊಂಡಿದೆ.
ಯಾವುದೇ ತುರ್ತು ಸ್ಥಿತಿ ಅಥವಾ ಕೊರೋನ ಬಿಕ್ಕಟ್ಟಿನಂತಹ ಸಂಕಷ್ಟದ ಸ್ಥಿತಿಯನ್ನೆದುರಿಸಲು ಮತ್ತು ಬಾಧಿತರಿಗೆ ಪರಿಹಾರವನ್ನು ಒದಗಿಸಲು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು. 2020-21ನೇ ಸಾಲಿನಲ್ಲಿ ಕೋವಿಡ್ ಲಸಿಕೆ ಖರೀದಿ ಮತ್ತು ಪರೀಕ್ಷೆ, ವೆಂಟಿಲೇಟರ್ಗಳು, ಆಸ್ಪತ್ರೆಗಳು,ಪರೀಕ್ಷಾ ಲ್ಯಾಬ್‌ಗಳು,ಆಮ್ಲಜನಕ ಉತ್ಪಾದನಾ ಸ್ಥಾವರಗಳು ಮತ್ತು ವಲಸಿಗರ ಕಲ್ಯಾಣಕ್ಕಾಗಿ ನಿಧಿಯಿಂದ ಹಣವನ್ನು ವೆಚ್ಚ ಮಾಡಲಾಗಿದೆ. ಲಸಿಕೆ ಅಭಿವೃದ್ಧಿಗೆ ನೆರವಾಗಲು 100 ಕೋ.ರೂ.ಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು 2020,ಮಾ.13ರಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದರಾದರೂ,ಅಂತಹ ಯಾವುದೇ ವೆಚ್ಚವನ್ನು ವರದಿಯು ಉಲ್ಲೇಖಿಸಿಲ್ಲ.
2020,ಮಾ.27ರಂದು ಸ್ಥಾಪನೆಯಾದ ನಿಧಿಯು ಕೇವಲ ಐದೇ ದಿನಗಳಲ್ಲಿ,ಅಂದರೆ 2019-20ನೇ ವಿತ್ತವರ್ಷವು ಅಂತ್ಯಗೊಳ್ಳುವ ಮುನ್ನ ಮೂಲನಿಧಿ,ವಿದೇಶಿ ಮತ್ತು ದೇಶಿಯ ದೇಣಿಗೆಗಳು ಹಾಗೂ ಬಡ್ಡಿ ಸೇರಿದಂತೆ 3,076 ಕೋ.ರೂ.ಗಳನ್ನು ಸಂಗ್ರಹಿಸಿತ್ತು. 2020-21ನೇ ವಿತ್ತವರ್ಷದಲ್ಲಿ ದೇಶಿಯ ದಾನಿಗಳಿಂದ 7,184 ಕೋ.ರೂ. ಮತ್ತು ವಿದೇಶಿ ದಾನಿಗಳಿಂದ 494 ಕೋ.ರೂ.ಗಳ ಸ್ವಯಂಪ್ರೇರಿತ ವಂತಿಗೆಗಳು ನಿಧಿಗೆ ಹರಿದುಬಂದಿದ್ದವು. ಬಡ್ಡಿ,ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಾಪಸ್ ಮಾಡಿದ್ದ ಬಳಕೆಯಾಗದೆ ಉಳಿದಿದ್ದ 25 ಲ.ರೂ. ಸೇರಿದಂತೆ ಆ ವರ್ಷದಲ್ಲಿ ನಿಧಿಯು ಒಟ್ಟು 7,193 ಕೋ.ರೂ.ಗಳನ್ನು ಸ್ವೀಕರಿಸಿತ್ತು.
ಅತ್ಯಂತ ಹೆಚ್ಚು ಹಣವನ್ನು (1393 ಕೋ.ರೂ.)ಕೋವಿಡ್ ಲಸಿಕೆಯ 6.6 ಕೋ.ಡೋಸ್‌ಗಳ ಖರೀದಿಗಾಗಿ ವೆಚ್ಚ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಿ ಆಸ್ಪತ್ರೆಗಳಲ್ಲಿ ಬಳಕೆಗಾಗಿ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ಗಳ ಖರೀದಿಗಾಗಿ 1,311 ಕೋ.ರೂ.ಗಳನ್ನು ವ್ಯಯಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ 162 ಆಮ್ಲಜನಕ ಘಟಕಗಳ ಸ್ಥಾಪನೆಗಾಗಿ 201 ಕೋ.ರೂ.,ಮುಝಫ್ಫರ್ನಗರ ಮತ್ತು ಪಾಟ್ನಾಗಳಲ್ಲಿ ತಲಾ 500 ಹಾಸಿಗೆಗಳ ಎರಡು ತಾತ್ಕಾಲಿಕ ಕೋವಿಡ್ ಆಸ್ಪತ್ರೆಗಳು ಮತ್ತು ಒಂಭತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 16 ಆರ್ಟಿ-ಪಿಸಿಆರ್ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ 50 ಕೋ.ರೂ.ವೆಚ್ಚ ಇವು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೈಗೊಂಡಿದ್ದ ಕ್ರಮಗಳಲ್ಲಿ ಸೇರಿವೆ.
ಕೋವಿಡ್ ಲಸಿಕೆಯ ಪರೀಕ್ಷೆ ಮತ್ತು ಬ್ಯಾಚ್‌ಗಳ ಬಿಡುಗಡೆಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದ ಎರಡು ಲ್ಯಾಬ್‌ಗಳನ್ನು ಕೇಂದ್ರ ಔಷಧಿ ಪ್ರಯೋಗಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು 20.4 ಕೋ.ರೂ.ಗಳನ್ನು ಬಳಸಲಾಗಿದೆ.
ಕೋವಿಡ್ ಲಾಕ್‌ಡೌನ್‌ಗಳ ಸಂದರ್ಭದಲ್ಲಿ ಅತಂತ್ರರಾಗಿದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,000 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.