ಯುನೆಸ್ಕೊ :ಹೆಚ್ಚಿನಂಶ ಕೋವಿಡ್ ಬಿಕ್ಕಟ್ಟು ಮಕ್ಕಳ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿಲ್ಲದಿದ್ದರೂ ಅವರ ಶಿಕ್ಷಣದ ಮೇಲೆ ತೀವ್ರ ದುಷ್ಪರಿಣಾಮವನ್ನುಂಟು ಮಾಡಿದೆ. ಶಾಲೆಗಳ ಮುಚ್ಚುಗಡೆಯ ಪರಿಣಾಮಗಳು ದೀರ್ಘಗಾಮಿಯಾಗಿವೆ ಮತ್ತು ಅತ್ಯಂತ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳ ಮೇಲೆ ಅದರ ಋಣಾತ್ಮಕ ಪರಿಣಾಮಗಳು ಜೀವನವಿಡೀ ಇರಲಿವೆ.
ಕೋವಿಡ್ ಸೃಷ್ಟಿಸಿರುವ ಸಮಸ್ಯೆಗಳಿಗೆ ಭಾರೀ ಬೆಲೆಯನ್ನು ತೆರುವಂತಾಗಿದೆ. ಪ್ರಸ್ತುತ ವಿಶ್ವಾದ್ಯಂತ 38 ಮಿಲಿಯ ಮಕ್ಕಳು ಶಾಲಾ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ವಿಶ್ವಾದ್ಯಂತ ಮಕ್ಕಳು ತರಗತಿಯಲ್ಲಿ ಕಲಿಕೆಯ ಅಂದಾಜು 1.8 ಲ.ಕೋ.ಗಂಟೆಗಳನ್ನು ಕಳೆದುಕೊಂಡಿದ್ದಾರೆ.
ಮಾರ್ಚ್ 2020ರಿಂದ ಸೆಪ್ಟಂಬರ್ 2021ರ ನಡುವಿನ ಅವಧಿಯಲ್ಲಿ 11 ದೇಶಗಳಲ್ಲಿಯ ಪೂರ್ವ ಪ್ರಾಥಮಿಕದಿಂದ ಉನ್ನತ ಮಾಧ್ಯಮಿಕ ತರಗತಿಗಳ 131 ಮಿ.ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಯ ಕನಿಷ್ಠ ಮುಕ್ಕಾಲು ಸಮಯ ಸಂಪೂರ್ಣವಾಗಿ ನಷ್ಟಗೊಂಡಿದೆ.
ಭಾಗಶಃ ಶಾಲೆಗಳ ಮುಚ್ಚುವಿಕೆಗಳು ಮತ್ತು ಮನೆ ಜೀವನದಲ್ಲಿನ ವ್ಯತ್ಯಯಗಳಂದಾಗಿ ಹೆಚ್ಚುವರಿಯಾಗಿ 100 ಮಿ.ಗೂ ಅಧಿಕ ಮಕ್ಕಳ ಓದುವಿಕೆ ಸಾಮರ್ಥ್ಯ ಕುಂಠಿತಗೊಳ್ಳಲಿದೆ.
ಎಳೆಯ ವಯಸ್ಸಿನಲ್ಲಿ ಕಲಿಕೆಯ ನಷ್ಟವು ದೂರಗಾಮಿಯಾಗಿರುತ್ತದೆ. ಮಕ್ಕಳು ಶಾಲೆಯಲ್ಲಿ ಹಿಂದುಳಿಯಬಹುದು,ತಮ್ಮ ಕಲಿಕೆಯ ಹಿಂದಿನ ಮಟ್ಟವನ್ನು ತಲುಪಲು ಅವರಿಗೆಂದೂ ಸಾಧ್ಯವಾಗದಿರಬಹುದು ಮತ್ತು ಅವರು ಶಿಕ್ಷಣವನ್ನು ಮುಂದುವರಿಸುವುದನ್ನು ಅಸಾಧ್ಯವಾಗಿಸಬಹುದು.
11 ಮಿಲಿಯನ್ ಬಾಲಕಿಯರು ಶಾಲೆಗಳಿಗೆ ಮರಳದಿರಬಹುದು ಮತ್ತು ಇದು ಲಿಂಗ ಸಮಾನತೆಯ ನಿಟ್ಟಿನಲ್ಲಿ ದಶಕಗಳ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಲಿದೆ,ಜೊತೆಗೆ ಬಾಲಕಿಯರು ಹದಿಹರೆಯದಲ್ಲಿಯೇ ಗರ್ಭವನ್ನು ಧರಿಸುವ,ಪಕ್ವಗೊಳ್ಳದ ವಯಸ್ಸಿನಲ್ಲಿ ಬಲವಂತದ ಮದುವೆಯ ಮತ್ತು ಹಿಂಸೆಯ ಅಪಾಯಕ್ಕೆ ಅವರನ್ನು ತಳ್ಳುತ್ತದೆ. ಲಿಂಗ ದೃಷ್ಟಿಕೋನದಿಂದ ನೋಡಿದಾಗ ಚಿತ್ರಣವು ಘೋರವಾಗಿದೆ ಎಂದು ಯುನೆಸ್ಕೊ ತನ್ನ ವರದಿಯಲ್ಲಿ ಹೇಳಿದೆ.
ಕೋವಿಡ್ ಬಿಕ್ಕಟ್ಟಿನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟಾಗ ವಿಶ್ವಾದ್ಯಂತ ದೇಶಗಳು ಆನ್ಲೈನ್ ಕಲಿಕೆಗೆ ಆದ್ಯತೆ ನೀಡಿದ್ದವು. ಟಿವಿ,ರೇಡಿಯೊ,ಮುದ್ರಿತ ಆಡಿಯೊಗಳು ಮತ್ತು ವೀಡಿಯೊಗಳ ಜೊತೆಗೆ ಮೊಬೈಲ್ಗಳಲ್ಲಿ ನೇರ ತರಗತಿಗಳನ್ನು ಬಳಸಿಕೊಳ್ಳಲಾಗಿತ್ತು.
ಆದಾಗ್ಯೂ ಮಕ್ಕಳು ಸೇರಿದಂತೆ 2.2 ಶತಕೋಟಿ ಜನರು ಮನೆಯಲ್ಲಿ ಅಂತರ್ಜಾಲ ಸಂಪರ್ಕವನ್ನು ಹೊಂದಿಲ್ಲ. ಶ್ರೀಮಂತ ರಾಷ್ಟ್ರಗಳಿಗೆ (ಶೇ.87) ಹೋಲಿಸಿದರೆ ಬಡ ರಾಷ್ಟ್ರಗಳಲ್ಲಿ (ಶೇ.6)ಅಂತರ್ಜಾಲ ವ್ಯಾಪ್ತಿ ಅತ್ಯಂತ ಕಡಿಮೆಯಿದೆ.
ಜಾಗತಿಕವಾಗಿ ದೂರಶಿಕ್ಷಣ ಅವಕಾಶಗಳಿಂದ ವಂಚಿತರಾಗಿರುವ ಪ್ರತಿ ನಾಲ್ವರು ವಿದ್ಯಾರ್ಥಿಗಳಲ್ಲಿ ಮೂವರು ಗ್ರಾಮೀಣ ಪ್ರದೇಶಗಳು/ಬಡ ಕುಟುಬಗಳಿಗೆ ಸೇರಿದವರಾಗಿದ್ದಾರೆ,ಇದು ಶಿಕ್ಷಣದ ಲಭ್ಯತೆಯಲ್ಲಿನ ಹಾಲಿ ಅಸಮಾನತೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.
ಯುನಿಸೆಫ್ ಪ್ರಕಾರ ಸಾಂಕ್ರಾಮಿಕದ ಸಂದರ್ಭದಲ್ಲಿ 31ಕ್ಕೂ ಹೆಚ್ಚಿನ ದೇಶಗಳು ದೂರ ಶಿಕ್ಷಣ ವ್ಯವಸ್ಥೆಯನ್ನು ನಿಯೋಜಿಸಲು ಅಗತ್ಯ ಸಿದ್ಧತೆಗಳನ್ನೇ ಮಾಡಿಕೊಂಡಿರಲಿಲ್ಲ ಮತ್ತು ಇದು 200 ಮಿ.ಶಾಲಾಮಕ್ಕಳ ಮೇಲೆ ಪರಿಣಾಮವನ್ನುಂಟು ಮಾಡಿತ್ತು.
ಶಾಲೆಗಳ ಮುಚ್ಚುವಿಕೆಯು ಮಕ್ಕಳ ಮೇಲೆ ಅವರ ಕಲಿಕೆಯನ್ನೂ ಮೀರಿ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ,ಅವರ ಮಾನಸಿಕ ಆರೋಗ್ಯ ಮತ್ತು ಅವರ ಯೋಗಕ್ಷೇಮವನ್ನು ಗುರಿಯಾಗಿಸಿಕೊಂಡು ಹಾನಿಗೆ ಕಾರಣವಾಗುತ್ತದೆ. ವಿಶ್ವಾದ್ಯಂತ ಮಕ್ಕಳು ಸಾಮಾಜಿಕ ಪ್ರತ್ಯೇಕತೆ,ಪೌಷ್ಟಿಕಾಂಶದ ಅಲಭ್ಯತೆ ಮತ್ತು ದೈಹಿಕ ವ್ಯಾಯಾಮದ ಕೊರತೆಯ ಸಮಸ್ಯೆಗಳೊಂದಿಗೆ ಹಣಗುತ್ತಿದ್ದಾರೆ ಮತ್ತು ಇದು ಅವರ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ ಎಣಂದು ಯುನೆಸ್ಕೋ ನಡೆಸಿರುವ ಸಮೀಕ್ಷೆಯು ಬಹಿರಂಗಗೊಳಿಸಿದೆ.
ಭಾರತದಲ್ಲಿ ಪರಿಣಾಮ
ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕವು ಗ್ರಾಮೀಣ ಮತ್ತು ಯುವ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಒಂದು ಮತ್ತು ಎರಡನೇ ತರಗತಿಗಳ ಮೂವರು ಮಕ್ಕಳ ಪೈಕಿ ಒಂದು ಮಗು ತರಗತಿಗೆ ಎಂದೂ ಹಾಜರಾಗಿರಲಿಲ್ಲ ಮತ್ತು ಈ ಎಳೆಯ ಮಕ್ಕಳಿಗೆ ತಂತ್ರಜ್ಞಾನದ ಲಭ್ಯತೆಯು ಕನಿಷ್ಠವಾಗಿತ್ತು ಎಂದು 2021ರ ಶೈಕ್ಷಣಿಕ ಸ್ಥಿತಿಗತಿಯ ವಾರ್ಷಿಕ ವರದಿಯು ಹೇಳಿದೆ.
ಈ ವರ್ಗಗಳ ಸುಮಾರು ಮೂರನೇ ಒಂದರಷ್ಟು ಮಕ್ಕಳಿಗೆ ಮನೆಯಲ್ಲಿ ಸ್ಮಾರ್ಟ್ ಫೋನ್ಗಳು ಲಭ್ಯವಿರಲಿಲ್ಲ. ಗ್ರಾಮೀಣ ಮತ್ತ ಅಭಿವೃದ್ಧಿಗೊಳ್ಳದ ಪ್ರದೇಶಗಳಲ್ಲಿಯ ಮಕ್ಕಳು ಹೆಚ್ಚಿನ ಕಲಿಕೆಯ ಪ್ರತ್ಯೇಕತೆಯನ್ನು ಅನುಭವಿಸಿದ್ದರು.
15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ವರ್ಷದ ಆಗಸ್ಟ್ನಲ್ಲಿ ನಡೆಸಲಾಗಿದ್ದ ಸಮೀಕ್ಷೆಯೊಂದು ಕೇವಲ ಶೆ.8ರಷ್ಟು ಗ್ರಾಮೀಣ ಮಕ್ಕಳು ನಿಯಮಿತವಾಗಿ ಆನ್ಲೈನ್ ಕಲಿಕೆಯಲ್ಲಿ ತೊಡಗಿದ್ದಾರೆ ಎಂದು ಹೇಳಿತ್ತು. ಶೇ.37ರಷ್ಟು ಮಕ್ಕಳು ಕಲಿಕೆಯನ್ನು ಮರೆತೇಬಿಟ್ಟಿದ್ದರು. ಸಮೀಕ್ಷೆಗೊಳಗಾಗಿದ್ದ ಅರ್ಧದಷ್ಟು ಮಕ್ಕಳು ನಿರಕ್ಷರಿಗಳಾಗಿದ್ದರು.
ಶೈಕ್ಷಣಿಕ ಕ್ಷೇತ್ರದ ಚೇತರಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದಿರುವ ಯುನೆಸ್ಕೊ,ಇದು ನಾವು ಎದುರಿಸುತ್ತಿರುವ ಕೊನೆಯ ಜಾಗತಿಕ ಆರೋಗ್ಯ ಬಿಕ್ಕಟ್ಟೇನೂ ಅಲ್ಲ. ಹೀಗಾಗಿ ಪ್ರತಿಯೊಂದು ಕಡೆಯಲ್ಲಿಯೂ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಗಮನವನ್ನು ಕೇಂದ್ರೀಕರಿಸಬೇಕು ಎಂದಿದೆ.