ನವದೆಹಲಿ : ಕೋವಿಡ್ ನಿಂದಾಗಿ ಶಾಲೆಗಳು ಮುಚ್ಚಿದ್ದವು ಮತ್ತು ಡಿಜಿಟಲ್ ಶಿಕ್ಷಣವು ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆಯನ್ನು ಇನ್ನಷ್ಟು ಹದಗೆಡಿಸಿದೆ. ಮಕ್ಕಳು ಸಾಮಾಜಿಕ ಬೆಳವಣಿಗೆಯಿಂದ ವಂಚಿತರಾಗಿದ್ದು, ಕಲಿಕೆಯಲ್ಲಿ ಹಿಂದುಳಿದಿದ್ದಾರೆ.
ಶಾಲಾ ಶಿಕ್ಷಣವನ್ನು ಪುನರಾರಂಭಿಸಲು ಮತ್ತು ನವೀಕರಿಸಲು ಒಂದುಗೂಡಿರುವ ದೇಶಾದ್ಯಂತದ ವ್ಯಕ್ತಿಗಳು ಮತ್ತು ಸಂಘಟನೆಗಳ ಒಕ್ಕೂಟವಾಗಿರುವ ನ್ಯಾಷನಲ್ ಕೋಯೆಲಿಷನ್ ಆನ್ ದಿ ಎಜ್ಯುಕೇಷನ್ ಎಮರ್ಜೆನ್ಸಿ (ಎನ್ಸಿಇಇ) 21 ರಾಜ್ಯಗಳ ಬಜೆಟ್ ಅಂದಾಜುಗಳು, 2020-21ನೇ ಸಾಲಿನ ಪರಿಷ್ಕೃತ ಅಂದಾಜುಗಳು ಮತ್ತು 2021-22ನೇ ಸಾಲಿನ ಬಜೆಟ್ ಅಂದಾಜುಗಳನ್ನು ವಿಶ್ಲೇಷಿಸಿ ವರದಿಯೊಂದನ್ನು ಬಿಡುಗಡೆಗೊಳಿಸಿದೆ.
ವರದಿಯಂತೆ 21 ರಾಜ್ಯಗಳ ಪೈಕಿ 19 ರಾಜ್ಯಗಳು 2021-22ನೇ ಸಾಲಿಗೆ ಶಿಕ್ಷಣಕ್ಕಾಗಿ ನಿಗದಿಗೊಳಿಸಿದ್ದಕ್ಕಿಂತ ಕಡಿಮೆ ಹಣವನ್ನು ವೆಚ್ಚ ಮಾಡಿವೆ. ಅಂದರೆ ಅವುಗಳ ಪರಿಷ್ಕೃತ ಅಂದಾಜುಗಳು ಆ ವರ್ಷದ ಬಜೆಟ್ ಅಂದಾಜುಗಳಿಗಿಂತ ಕಡಿಮೆಯಾಗಿದ್ದವು. ಎರಡನೇ ಸಾಂಕ್ರಾಮಿಕ ವರ್ಷ (2021-22)ಕ್ಕಾಗಿ ಎರಡು ರಾಜ್ಯಗಳ (ಅಸ್ಸಾಂ ಮತ್ತು ತಮಿಳುನಾಡು) ಬಜೆಟ್ ಹಂಚಿಕೆ 2020-21ನೇ ಸಾಲಿನಲ್ಲಿಯ ಅಂದಾಜು ವೆಚ್ಚ (ಅಥವಾ ಪರಿಷ್ಕೃತ ಅಂದಾಜು)ಕ್ಕಿಂತ ಕಡಿಮೆಯಾಗಿದ್ದವು. ಈಗಾಗಲೇ ಹೇಳಿರುವಂತೆ ಈ ಪರಿಷ್ಕೃತ ಅಂದಾಜುಗಳೇ ಕೋವಿಡ್ ಸಾಮಾನ್ಯ ಜನಜೀವನವನ್ನು ವ್ಯತ್ಯಯಗೊಳಿಸುವ ಮುನ್ನ ಮಂಡಿಸಲಾಗಿದ್ದ ಕಳೆದ ವರ್ಷದ ಬಜೆಟ್ಗಿಂತ ಕಡಿಮೆಯಾಗಿದ್ದವು. ಒಟ್ಟಾರೆಯಾಗಿ ಈ ರಾಜ್ಯಗಳ ಪೈಕಿ ಐದು ಹಾಲಿ ವರ್ಷದಲ್ಲಿ ಶಿಕ್ಷಣಕ್ಕೆ ಕಳೆದ ವರ್ಷಕ್ಕಿಂತ ಕಡಿಮೆ ಹಂಚಿಕೆ ಮಾಡಿದ್ದವು.
ಸಾಂಕ್ರಾಮಿಕದ ಮೊದಲ ವರ್ಷದಲ್ಲಿ 21 ರಾಜ್ಯಗಳ ಪೈಕಿ 14 ರಾಜ್ಯಗಳು ಒಟ್ಟು ಬಜೆಟ್ ನ ಅನುಪಾತದಲ್ಲಿ ಶಿಕ್ಷಣಕ್ಕಾಗಿ ತಮ್ಮ ಮುಂಗಡಪತ್ರ ಹಂಚಿಕೆಯನ್ನು ತಗ್ಗಿಸಿದ್ದವು. ಅಂದರೆ ಈ ರಾಜ್ಯಗಳು ಆ ವರ್ಷ ತಮ್ಮ ಮುಂಗಡಪತ್ರಗಳಲ್ಲಿ ಶಿಕ್ಷಣಕ್ಕೆ ನೀಡಿದ್ದ ಮಹತ್ವವನ್ನು ಕಡಿಮೆ ಮಾಡಿದ್ದವು. ಇದೇ ವೇಳೆ ಈ 14 ರಾಜ್ಯಗಳ ಪೈಕಿ ಎಂಟು ರಾಜ್ಯಗಳು ಆ ವರ್ಷ ತಮ್ಮ ಒಟ್ಟು ವೆಚ್ಚವನ್ನು ಹೆಚ್ಚಿಸಿದ್ದವು.
ಸಾಂಕ್ರಾಮಿಕದ ಎರಡನೇ ವರ್ಷ (2021-22)ದಲ್ಲಿ ಕೋವಿಡ್ ಮೊದಲ ಅಲೆಯು ಶಮನಗೊಂಡು ಎರಡನೇ ಅಲೆ ಇನ್ನೂ ತಿಂಗಳುಗಳಷ್ಟು ದೂರವಿದ್ದರೂ 21ರ ಪೈಕಿ 12 ರಾಜ್ಯಗಳು 2020-21ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಶಿಕ್ಷಣಕ್ಕಾಗಿ ತಮ್ಮ ಹಂಚಿಕೆಗಳನ್ನು ಕಡಿಮೆ ಮಾಡಿದ್ದವು. ಈ ಎಲ್ಲ 12 ರಾಜ್ಯಗಳು ತಮ್ಮ ಒಟ್ಟು ವೆಚ್ಚವನ್ನು ಹೆಚ್ಚಿಸಿದ್ದವು ಮತ್ತು ಶಿಕ್ಷಣಕ್ಕೆ ನೀಡಲಾಗಿದ್ದ ಮಹತ್ವವನ್ನು ಇನ್ನಷ್ಟು ಕಡಿಮೆಗೊಳಿಸಿದ್ದವು.
ಕೋಟ್ಯಂತರ ಬಡಮಕ್ಕಳು ತಮ್ಮ ಪ್ರಾಥಮಿಕ ಕೌಶಲ್ಯಗಳನ್ನು ಕಳೆದುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದ ಮೇಲೆ ಉಂಟಾಗಿರುವ ದುಷ್ಪರಿಣಾಮಗಳನ್ನು ನಿವಾರಿಸಲು ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ನಿಧಿಯ ಹರಿವು ಮತ್ತು ಪರಿಷ್ಕೃತ ಬಹುವರ್ಷೀಯ ಶಿಕ್ಷಣ ಕಾರ್ಯತಂತ್ರದ ಅಗತ್ಯವಿದೆ ಎಂದು ವಿಶ್ವಬ್ಯಾಂಕಿನ ಮಾಜಿ ಸಲಹೆಗಾರರು ಮತ್ತು ಎನ್ಸಿಇಇ ಸದಸ್ಯೆಯೂ ಆಗಿರುವ ಸಜಿತಾ ಬಶೀರ್ ಅಭಿಪ್ರಾಯಿಸಿದ್ದಾರೆ ಎಂದು IndiaSpend.com ವರದಿ ಮಾಡಿದೆ.