ಉಡುಪಿ: ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಮರಕ್ಕೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಎಲ್ಲಾ ಪ್ರೌಢ ಶಾಲಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಆದೇಶಿಸಿದ್ದಾರೆ.
ಈ ಆದೇಶ ಫೆ. 14 ಬೆಳಗ್ಗೆ 6 ಗಂಟೆಯಿಂದ ಫೆ. 19 ರ ಸಂಜೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.
ಹಿಜಾಬ್ ವಿವಾದ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸದ್ಯ ಈಗ ರಾಜ್ಯದಲ್ಲಿ ನಾಳೆಯಿಂದ ಪ್ರೌಢಶಾಲೆ ಪುನಾರಂಭಗೊಳ್ಳಲಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ, ಪ್ರತಿಭಟನೆ, ಮೆರವಣಿಗೆ, ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ ವ್ಯಕ್ತಿ, ಜಾತಿ ಧರ್ಮದ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯ ಮೂವರು ಉಪವಿಭಾಗಾಧಿಕಾರಿಗಳ ಮನವಿ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಡಿಸಿ ಕೂರ್ಮಾರಾವ್ ತಿಳಿಸಿದ್ದಾರೆ.ಉಡುಪಿ ಎಸ್ಪಿ ವಿಷ್ಣುವರ್ಧನ್ ಫೆಬ್ರವರಿ 11 ರಂದು ಡಿಸಿಗೆ ಪತ್ರ ಬರೆದು ಶಾಲಾ ಆವರಣದಲ್ಲಿ ಶಾಂತಿಯುತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ನಿಷೇಧಾಜ್ಞೆ ಜಾರಿಗೊಳಿಸಬೇಕು ಎಂದು ತಿಳಿಸಿದ್ದರು.