ಬೆಂಗಳೂರು: ಹಿಜಾಬ್ ವಿವಾದ ಕುರಿತ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತ್ರಿಸದಸ್ಯ ಪೀಠ, ಸದ್ಯಕ್ಕೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಆದೇಶ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ. ನಾವು ಸೋಮವಾರದಿಂದ ಪ್ರತಿದಿನ ವಿಚಾರಣೆಯನ್ನು ಮುಂದುವರಿಸುತ್ತೇವೆ ಮತ್ತು ಶೀಘ್ರದಲ್ಲೆ ಈ ಕುರಿತು ನಿರ್ಧರಿಸುತ್ತೇವೆ.
ಮೇಲಾಗಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ನಾವು ಬಯಸುತ್ತೇವೆ. ವಿಷಯಗಳು ನಿರ್ಧಾರವಾಗುವವರೆಗೆ ಧಾರ್ಮಿಕ ಗುರುತು ಸೂಚಿಸುವಂತಾ ವಸ್ತ್ರಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗಲು ಒತ್ತಾಯಿಸಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.
ಇಂದು ಹಿಜಾಬ್ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಈ ಮೌಖಿಕ ಆದೇಶ ನೀಡಿದೆ. ಅದರಂತೆ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಬಳಸದೆ ಸಮವಸ್ತ್ರವನ್ನು ಮಾತ್ರ ಧರಿಸಿ ಬರಬೇಕು. ಇನ್ನು ಅರ್ಜಿಯ ವಿಚಾರಣೆ ಮುಗಿಯುವವರೆಗೂ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥತೆಗೆ ಧಕ್ಕೆಯಾಗಬಾರದು ಎಂದು ಪೀಠ ಆದೇಶಿಸಿದೆ.
ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿರುವ ರಿತು ರಾಜ್ ಅವಸ್ಥಿ ಅವರು ತುರ್ತಾಗಿ ಅರ್ಜಿಯ ವಿಚಾರಣೆ ಮುಗಿಸಲು ಆಗುವುದಿಲ್ಲ. ವಾದ-ಪ್ರತಿವಾದಗಳನ್ನು ಕೂಲಂಕೂಶವಾಗಿ ಪರಿಶೀಲಿಸಬೇಕಿದೆ. ಹೀಗಾಗಿ ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದ್ದು ವಿದ್ಯಾರ್ಥಿಗಳು ಸಮವಸ್ತ್ರ ಮಾತ್ರ ಧರಿಸಿ ಬರಬೇಕು ಎಂದು ತಿಳಿಸಿದೆ.
ಹಿಜಾಬ್ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ದೇವದತ್ ಕಾಮತ್ ಅವರು ವಾದ ಮಂಡಿಸಿದರು. ಇನ್ನು ಹಿರಿಯ ವಕೀಲರಾದ ಸಂಜಯ್ ಹೆಗಡೆ ಸಹ ವಾದ ಮಂಡಿಸಿದ್ದರು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ವಾದ ಮಂಡಿಸಿದರು.