ಭುವನೇಶ್ವರ: ಏಳು ರಾಜ್ಯಗಳಲ್ಲಿ 14 ಮದುವೆಯಾಗಿರುವ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
48 ವರ್ಷದ ವ್ಯಕ್ತಿ, ಒಡಿಶಾದ ಪಟ್ಕುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದು, ಮದುವೆಯಾಗಿ ಬಳಿಕ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದರು ಎಂಬ ಆರೋಪವಿದೆ.
ಆದರೆ ಬಂಧಿತ ವ್ಯಕ್ತಿ, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. 1982ರಲ್ಲಿ ಮೊದಲ ಮದುವೆಯಾಗಿದ್ದ ವ್ಯಕ್ತಿ, ನಂತರ 2002ರಲ್ಲಿ ಎರಡನೇ ಮದುವೆಯಾಗಿದ್ದರು. ಈ ಎರಡೂ ಮದುವೆಯಲ್ಲಿ ಒಟ್ಟು ಐದು ಮಕ್ಕಳಿಗೆ ತಂದೆಯಾಗಿದ್ದಾರೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅದಾದ ಬಳಿಕ 2002 ಮತ್ತು 2020ರ ಅವಧಿಯಲ್ಲಿ ವಿವಿಧ ಮ್ಯಾಟ್ರಿಮನಿ ವೆಬ್‌ಸೈಟ್ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ವೈದ್ಯನೆಂದು ಪರಿಚಯ ಮಾಡಿಕೊಳ್ಳುತ್ತಿದ್ದ ವ್ಯಕ್ತಿ, ನ್ಯಾಯವಾದಿ, ವೈದ್ಯೆ ಸಹಿತ ಉನ್ನತ ಶಿಕ್ಷಣ ಪಡೆದವರನ್ನೇ ಮದುವೆಯಾಗುತ್ತಿದ್ದರು. ಅವರಿಂದ ವಂಚನೆಗೊಳಗಾದವರಲ್ಲಿ ಅರೆಸೇನಾ ಪಡೆಯ ಓರ್ವ ಸಿಬ್ಬಂದಿಯೂ ಇದ್ದಾರೆ.
ಬಂಧಿತ ವ್ಯಕ್ತಿಯ ಕೊನೆಯ ಪತ್ನಿ, ದೆಹಲಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರಿಗೆ ಈ ವ್ಯಕ್ತಿ ಹಲವು ಮದುವೆಯಾಗಿ ವಂಚಿಸಿರುವ ವಿಚಾರ ತಿಳಿದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ದೂರು ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.