ವಿಜ್ಞಾನ ಅದೆಷ್ಟೇ ಮುಂದುವರಿದಿದ್ದರೂ, ಕೆಲವೊಂದು ವಿಚಾರಗಳಿಗೆ ಉತ್ತರ ಕಂಡುಹಿಯಲು ಇಂದಿಗೂ ಸಾಧ್ಯವಾಗಿಲ್ಲ. ಅಂತಹ ವಿಷಯಗಳಲ್ಲಿ ಸಾವು ಕೂಡ ಒಂದು. ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಯಲೇಬೇಕು. ಆದರೆ, ಯಾವಾಗ, ಹೇಗೆ ಸಾವು ಬರುವುದು, ಸಾಯುವ ಮುನ್ನದ ಅನುಭವಗಳೇನು ಎಂಬುದನ್ನು ತಿಳಿದುಕೊಳ್ಳಲು ಇದುವರೆಗೂ ಆಗಿಲ್ಲ. ಆದರೆ, ಇದೀಗ ವಿಜ್ಞಾನಿಗಳ ತಂಡವೊಂದು ಸಾಯುವ ವೇಳೆಯಲ್ಲಿ ಮನುಷ್ಯನ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ, ಆತನ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ಪತ್ತೆ ಮಾಡಿದೆ. ಈ ಕುರಿತು ಮತ್ತಷ್ಟು ಮಾಹಿತಿ ನಿಮಗಾಗಿ.
ಏನಿದು ಅಧ್ಯಯನ?:
ಡೈಲಿ ಮೇಲ್ ವರದಿಯ ಪ್ರಕಾರ, 87 ವರ್ಷದ ವ್ಯಕ್ತಿಯೊಬ್ಬರು ಅಪಸ್ಮಾರಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಇದು ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (EEG) ಗೆ ಸಂಬಂಧಿಸಿದ್ದಾಗಿದೆ. ಆದರೆ ಚಿಕಿತ್ಸೆ ನಡೆಯುವಾಗಲೇ ವ್ಯಕ್ತಿ ಹಠಾತ್ತನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ಅವರ ಸಾವಿನ ಮೊದಲ 15 ನಿಮಿಷಗಳನ್ನು ಈಸಿಯಲ್ಲಿ ದಾಖಲಿಸಲಾಗಿದೆ. ಇದರಿಂದ ವ್ಯಕ್ತಿಯು ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಏನು ನೆನಪು ಮಾಡಿಕೊಳ್ಳುತ್ತಿದ್ದ, ಆತನ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು ಎಂಬುದನ್ನು ಅರಿತುಕೊಳ್ಳಲಾಗಿದೆ.
ಸಾಯುವ ಕ್ಷಣಗಳಲ್ಲಿ ಮೆದುಳು ಹೇಗೆ ಪ್ರತಿಕ್ರಿಯಿಸುತ್ತಿತ್ತು?:
ಡೈಲಿ ಮೇಲ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಾಯುವ ಮೊದಲು ಮನುಷ್ಯ ಮೆದುಳು ಇಡೀ ಜೀವನದಲ್ಲಿ ನಡೆದ ಉತ್ತಮ ಘಟನೆಗಳನ್ನು ಮರುನೆನಪು ಮಾಡಿಕೊಳ್ಳುತ್ತಿತ್ತು ಎನ್ನಲಾಗಿದೆ. ಸಾಯುವ 15 ನಿಮಿಷದ ಮುನ್ನದ ಮೆದುಳಿನ ಕಾರ್ಯಗಳನ್ನು ಗಮನಿಸಿದ್ದು, ಇದರಲ್ಲಿ ಆತ ಕಳೆದ ಉತ್ತಮ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದ, ಆ ಘಟನೆಗಳ ಕುರಿತು ಕನಸು ಕಾಣುತ್ತಿದ್ದ ಎಂದು ವರದಿ ಹೇಳಿದೆ. ಜೊತೆಗೆ ಸಾವಿಗೂ 30 ಸೆಕೆಂಡ್ ಮುನ್ನ ರೋಗಿಯ ಹೃದಯ ಬಡಿತವು ತುಂಬಾ ವೇಗವಾಗಿತ್ತು, ಅಷ್ಟೇ ಅಲ್ಲ, ಹೃದಯ ಬಡಿತ ಸ್ಥಗಿತಗೊಳ್ಳುವ ಮೊದಲ 30 ಸೆಕೆಂಡುಗಳ ಕಾಲ ಮೆದುಳನ್ನು ಗಮನಿಸಿದ್ದು, ಅಲ್ಲೂ ಸಹ ಬದಲಾವಣೆಯನ್ನು ಕಂಡಿದ್ದೇವೆ ಎಂದು ಯುಎಸ್ನ ಲೂಯಿಸ್ವಿಲ್ಲೆ ವಿಶ್ವವಿದ್ಯಾಲಯದ ನರಶಸ್ತ್ರಚಿಕಿತ್ಸಕ ಡಾ ಅಜ್ಮಲ್ ಝೆಮ್ಮರ್ ತಿಳಿಸಿದ್ದಾರೆ.
ದೇಹದ ಕಾರ್ಯ ನಿಂತರೂ ಮನಸ್ಸು ಕ್ರಿಯಾಶೀಲ!:
ವಿಜ್ಞಾನಿಗಳ ಪ್ರಕಾರ, ವ್ಯಕ್ತಿಯ ಕೊನೆಯ ಕ್ಷಣದಲ್ಲಿ ಮಾನವನ ಮನಸ್ಸು ಕನಸು ಕಾಣುತ್ತಿರುವಂತ ಸ್ಥಿತಿಯನ್ನು ತಲುಪಿತ್ತು. ಆಶ್ಚರ್ಯದ ಸಂಗತಿಯೆಂದರೆ ಆ ಸಮಯದಲ್ಲಿ ನಮ್ಮ ದೇಹ ಕಾರ್ಯ ನಿಲ್ಲಿಸಿದರೂ ನಮ್ಮ ಮನಸ್ಸು ಕೆಲಸ ಮಾಡುತ್ತದೆ. ನಮ್ಮ ಮೆದುಳು ಹಳೆಯ ಒಳ್ಳೆಯ ನೆನಪುಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹೆಚ್ಚಿನ ಅಧ್ಯಯನದ ಅಗತ್ಯ: ಜೀವನ ಅಂತ್ಯಗೊಂಡಾಗ ಮನಸ್ಸಿನಲ್ಲಿರುವ ಇಂತಹ ವಿಷಯಗಳು ಸವಾಲನ್ನು ಹೆಚ್ಚಿಸುತ್ತವೆ. ಏಕೆಂದರೆ ಈ ಸಮಯದಲ್ಲಿ ಮಾನವ ಅಂಗಾಂಗಗಳನ್ನು ದಾನ ಮಾಡಲು ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಮಾನವರ ಹೊರತಾಗಿ ಇಲಿಗಳಲ್ಲಿ ಇದೇ ರೀತಿಯ ಮೆದುಳಿನ ತರಂಗ ಬದಲಾವಣೆಗಳನ್ನು ಗಮನಿಸಲಾಗಿದೆ, ಆದರೆ ಮಾನವರಲ್ಲಿ ಹಿಂದೆಂದೂ ಕಂಡುಬಂದಿಲ್ಲ. ಮೊದಲ ಬಾರಿಗೆ, ಈ ರೀತಿಯ ಬದಲಾವಣೆಯು ಮಾನವರಲ್ಲಿ ಕಂಡುಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸುವ ಅಗತ್ಯವಿದೆ. ಆದರೆ ಒಂದು ಪ್ರಮುಖ ವಿಷಯವೆಂದರೆ ಸಾಯುವ ಹಂತದಲ್ಲಿ ಪ್ರತೀ ವ್ಯಕ್ತಿ ಕಣ್ಣು ಮುಚ್ಚಿದಾಗ ಆತನ ಜೀವನದಲ್ಲಾದ ಉತ್ತಮ ಘಟನೆಗಳು ಆ ವ್ಯಕ್ತಿಯ ಕಣ್ಣಮುಂದೆ ಹಾದುಹೋಗುತ್ತವೆ ಎಂದು ಡಾ ಅಜ್ಮಲ್ ಝೆಮ್ಮರ್ ತಿಳಿಸಿದ್ದಾರೆ.