ಬದಿಯಡ್ಕ: ಬಾಳೆಕಾಯಿಯ ಸರ್ವ ಉಪಯೋಗಗಳ ಕುರಿತು ಬೃಹತ್ ಮೇಳವೊಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಏಪ್ರಿಲ್ 16ರಂದು ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ವಿವಿವಿ ಪಾಕಲೋಕ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಊರಪರವೂರ ಗಣ್ಯರು, ಬಾಳೆಕೃಷಿಕರು, ಬಾಳೆಕಾಯಿ ಹಾಗೂ ಹಣ್ಣುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪರಿಣಿತರು ಪಾಲ್ಗೊಳ್ಳಲಿದ್ದಾರೆ. `ವಿಶೇಷ ವಿಶಿಷ್ಟ ವಿಷಮುಕ್ತ' ಎಂಬ ಧ್ಯೇಯವನ್ನಿಟ್ಟುಕೊಂಡು ಸಾವಯವ ಬಾಳೆ ಉತ್ಪನ್ನಗಳು ಅನಾವರಣಗೊಳ್ಳಲಿದೆ. ಬಾಳೆಕೃಷಿ, ಔಷೀಯ ಗುಣ, ಪುರಾತನ ಕಾಲದಲ್ಲಿ ಬಳಸಿಕೊಂಡಿದ್ದ ಬಾಳೆ ಉತ್ಪನ್ನಗಳು, ಎಲೆಯ ಮಹತ್ವದ ಕುರಿತು ನುರಿತ ತಜ್ಞರಿಂದ ವಿಚಾರ ಸಂಕಿರಣಗಳು ನಡೆಯಲಿದೆ.
ಈ ನಿಟ್ಟಿನಲ್ಲಿ ಶುಕ್ರವಾರ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿದ ಸಭೆಯಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷರು ಹಾಗೂ ವಿವಿವಿ ಪಾಕಲೋಕ ಸಮಿತಿಯ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪಾಕಲೋಕ ಸಮಿತಿಯ ಗೌರವಾಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಈಶ್ವರಿ ಬೇರ್ಕಡವು, ಪಾಕಲೋಕದ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಮುಂದಿನ ಕಾರ್ಯಗಳಿಗೆ ಮುಂದುವರಿಯಲು ತೀರ್ಮಾನಿಸಲಾಯಿತು.