ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಕಾನೂನುಬದ್ಧ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿರುವ ಸರ್ಕಾರದ ಧೋರಣೆ ಖಂಡಿಸಿ ಸಂತ್ರಸ್ತರ ಸಮಿತಿ ಮತ್ತೆ ಹೋರಾಟಕ್ಕೆ ಮುಂದಾಗಿದೆ. ರಾಜ್ಯ ಹೋರಾಟ ಐಕ್ಯದಾಢ್ರ್ಯ ಸಮಿತಿ ವತಿಯಿಂದ ಮಾ. 1ರಂದು ಬೆಳಗ್ಗೆ 10ಕ್ಕೆ ಬೆಂಬಲ ಸಮಾವೇಶ ಆಯೋಜಿಸಲಾಗಿದೆ.
ಪ್ರಮುಖ ಮಾನವಹಕ್ಕು-ಸಾಮಾಜಿಕ ಹೋರಾಟಗಾರ, ಎನ್‍ಎಪಿಎಂ ಅಖಿಲಭಾರತ ಕೋರ್ಡಿನೇಟರ್ ಡಾ. ಸಂಜಯ್ ಮಂಗಳ ಗೋಪಾಲ್ ಸಮಾರಂಭ ಉದ್ಘಾಟಿಸುವರು. ಈ ಸಂದರ್ಭ ರಾಜ್ಯದ 14ಜಿಲ್ಲೆಗಳಿಂದಲೂ ಪ್ರತಿನಿಧಿಗಳು ಪಾಲ್ಗೊಳ್ಳುವರು. ಎಂಡೋಸಲ್ಫಾನ್ ಸಂತ್ರಸ್ತರ ಜತೆಗಿದ್ದು, ಮುಂದೆ ನಡೆಸಬೇಕಾದ ಹೋರಾಟಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲೂ ಸಮಿತಿ ತೀರ್ಮಾನಿಸಿದೆ.
ಸಿ.ಆರ್ ನೀಲಕಂಠನ್, ಕೆ. ಅಜಿತಾ, ಅಂಬಿಕಾ ಸುತನ್ ಮಾಙËಡ್, ಕಲ್ಪೆಟ್ಟ ನಾರಾಯಣನ್, ಶಿಹಾಬುದ್ದೀನ್ ಮುಂತಾದವರು ಪಾಲ್ಗೊಳ್ಳುವರು. ಸಂತ್ರಸ್ತರು ಅನುಭವಿಸುತ್ತಿರುವ ನರಕಯಾತನೆ ದೂರಮಾಡಲು ತುರ್ತು ಕ್ರಮ ಕೈಗೊಳ್ಳಬೇಕು, ಮೆಡಿಕಲ್ ಸೆಲ್ನಲ್ಲಿ ಸಂತ್ರಸ್ತರ ಪ್ರತಿನಿಧಿಗಳ ಹೆಸರು ಸೇರಿಸಬೇಕು, ಸುಪ್ರೀಂಕೋರ್ಟು ತೀರ್ಪು ಜಾರಿಗೊಳಿಸಬೇಕು, ಪಟ್ಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಸಂತ್ರಸ್ತರಿಗೂ ಪಿಂಚಣಿ ಒದಗಿಸಬೇಕು, ಸಂತ್ರಸ್ತರ ಬ್ಯಾಂಕ್ ಸಾಲ ಮನ್ನಾಮಾಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಹೋರಾಟ ಮುಂದುವರಿಯಲಿರುವುದಾಗಿ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.