ಮುಂಬೈ: 2016ರ ನವೆಂಬರ್ 8ರಂದು ನೋಟು ಅಮಾನ್ಯೀಕರಣಗೊಂಡು ಐದೂವರೆ ವರ್ಷಗಳಾಗಿವೆ. ಅಕ್ರಮವಾಗಿ ಹಣ ಕೂಡಿಟ್ಟ ಎಷ್ಟೋ ಕಾಳಸಂತೆಕೋರರಿಗೆ ಇದು ಶಾಕ್ ಆಗಿ ಪರಿಣಮಿಸಿ, ನೋಟುಗಳನ್ನು ಸುಟ್ಟದ್ದೂ ಆಗಿದೆ. ಇನ್ನು ಕೆಲವರು ಕೆಲ ಕಾರಣಗಳಿಂದ ನೋಟನ್ನು ಬದಲಾಯಿಸಿಕೊಳ್ಳಲು ಪರದಾಡಿದ್ದೂ ಇದೆ.
ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂ. ಮೌಲ್ಯದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಮುಂಬೈ ಹೈಕೋರ್ಟ್ ಅನುಮತಿ ನೀಡಿದೆ. ಈ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕಿಗೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಅಷ್ಟಕ್ಕೂ ಆಗಿದ್ದೇನು?
ಮುಂಬೈನ ಡೊಂಬಿವಲ್ ನಿವಾಸಿ ಕಿಶೋರ್ ಸೊಹೋನಿ ಅವರು ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2016ರ ಮಾರ್ಚ್ನಲ್ಲಿ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಕೋರ್ಟ್ ಈ ಪ್ರಕರಣದ ಆರೋಪಿಗೆ ಪೊಲೀಸ್ ಠಾಣೆಯಲ್ಲಿ 1.6 ಲಕ್ಷ ರೂ. ಠೇವಣಿಯಿಡುವಂತೆ ಆದೇಶಿಸಿತ್ತು.
ಆದೇಶ ಪ್ರಕಟವಾದ ಬಳಿಕ ಈ ಠೇವಣಿ ಇಟ್ಟ ಹಣವನ್ನು ದೂರುದಾರರಾಗಿರುವ ಕಿಶೋರ್ ಸೊಹೋನಿ ಅವರಿಗೆ ನೀಡುವಂತೆ ಕೋರ್ಟ್ ಹೇಳಿತ್ತು. ಇದರ ಆದೇಶ ಹೊರಬಂದದ್ದು 2017ರ ಮಾರ್ಚ್ 20ರಂದು. ಅಂದರೆ ಅದಾಗಲೇ ನೋಟು ಅಮಾನ್ಯಗೊಂಡು ನಾಲ್ಕು ತಿಂಗಳಾಗಿತ್ತು. ಆದರೆ ಸೊಹೋನಿ ಅವರು ಆ ಹಣವನ್ನು ಪಡೆದುಕೊಂಡಿರಲಿಲ್ಲ. ನಂತರ ಲಾಕ್ಡೌನ್ ಕಾರಣದಿಂದ ಪೊಲೀಸ್ ಠಾಣೆಗೆ ಹೋಗಲು ಆಗಿರಲಿಲ್ಲ.
2020ರ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸ್ ಠಾಣೆಗೆ ತೆರಳಿ ಹಣ ಹಿಂತಿರುಗಿಸುವಂತೆ ಹೇಳಿದ್ದಾಗ ಅವರು ಬ್ಯಾನ್ ಆಗಿರೋ 1,000ರೂ. ನೋಟುಗಳನ್ನು ನೀಡಿದ್ದರು. ಅದನ್ನು ಪ್ರಶ್ನಿಸಿ ಕಿಶೋರ್ ಸೊಹೋನಿ ಕೋರ್ಟ್ ಮೆಟ್ಟಿಲೇರಿದ್ದರು.
ನೋಟ್ ಬ್ಯಾನ್ ಆಗುವ ಸಮಯದಲ್ಲಿ ವಿಧಿಸಲಾಗಿದ್ದ ಕೆಲವೊಂದು ಷರತ್ತು, ಸಡಿಲಿಕೆ ಕುರಿತಂತೆ ಆರ್ಬಿಐ ಪರ ವಕೀಲರು, 2017ರ ಮೇ 12ರ ಅಧಿಸೂಚನೆಯನ್ನು ಉಲ್ಲೇಖಿಸಿದರು. 'ಒಂದು ವೇಳೆ ನಿರ್ದಿಷ್ಟ ಬ್ಯಾಂಕಿನಿಂದ ಮುಟ್ಟುಗೋಲು ಹಾಕಿಕೊಂಡ ನೋಟುಗಳನ್ನು ನ್ಯಾಯಾಲಯ ಹಿಂತಿರುಗಿಸಿದರೆ, ಆಗ ಆ ವ್ಯಕ್ತಿ ಹಣವನ್ನು ನ್ಯಾಯಾಲಯದ ಆದೇಶದ ಅನುಸಾರ ಠೇವಣಿ ಅಥವಾ ವಿನಿಮಯ ಮಾಡಲು ಆರ್ಹನಾಗಿದ್ದಾನೆ' ಎಂದರು. ಎಲ್ಲಾ ದಾಖಲಾತಿ, ನಿಯಮಗಳನ್ನು ಪರಿಶೀಲನೆ ಮಾಡಿದ ಕೋರ್ಟ್, 'ಭಾರತ ಸಂವಿಧಾನದ ಪರಿಚ್ಛೇದ 226ರ ಅಡಿಯಲ್ಲಿನ ವಿಶೇಷ ಅಧಿಕಾರ ಬಳಸಿ ಆರ್ ಬಿಐಗೆ ಈ ನಿರ್ದೇಶನ ನೀಡಿದೆ. 'ಅರ್ಜಿದಾರರಿಗೆ ಸೇರಿದ ಅಮಾನ್ಯೀಕರಣಗೊಂಡ ನೋಟುಗಳನ್ನು ಪ್ರಸ್ತುತ ಮಾನ್ಯತೆ ಹೊಂದಿರೋ ನೋಟುಗಳೊಂದಿಗೆ ಬದಲಾಯಿಸಿ ನೀಡಬೇಕು. ಹಾಗೆಯೇ ಸೀರಿಯಲ್ ಸಂಖ್ಯೆಗಳ ನಮೂದು ಸೇರಿದಂತೆ ಅರ್ಜಿದಾರರ ಇತರ ಮನವಿಗಳನ್ನು ಪರಿಗಣಿಸಬೇಕು' ಎಂದು ಕೋರ್ಟ್ ಹೇಳಿದೆ.