ಕೊಚ್ಚಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ತೀವ್ರ ವಿವಾದ ಭುಗಿಲೆದ್ದಿರುವಾಗ 2018ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶ ಚರ್ಚೆಗೆ ಬಂದಿದೆ.
2018ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದು ಆಯಾ ಶಿಕ್ಷಣ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ನಿನ್ನೆ ಕರ್ನಾಟಕ ಹೈಕೋರ್ಟ್ ನಲ್ಲಿ ಹಿಜಾಬ್ ವಾದ-ವಿವಾದ ನಡೆಯುವಾಗ ವಕೀಲರು ಉಲ್ಲೇಖಿಸಿ ಹೇಳಿದರು.
ಶಾಲೆಯಲ್ಲಿ ಹಿಜಾಬ್ ಧರಿಸಲು ಮತ್ತು ತುಂಬು ತೋಳಿನ ಶರ್ಟ್ ಧರಿಸಲು ಅವಕಾಶ ನೀಡಬೇಕೆಂದು ಅಂದು ಇಬ್ಬರು ಮುಸ್ಲಿಂ ಹೆಣ್ಣುಮಕ್ಕಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್, ವಿದ್ಯಾರ್ಥಿಗಳ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲು ಸಾಧ್ಯವಿಲ್ಲ, ಇದು ಶಿಕ್ಷಣ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ದರು.
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದು ಆಯಾ ಶಿಕ್ಷಣ ಸಂಸ್ಥೆಗಳ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ನ್ಯಾಯಮೂರ್ತಿಗಳಾದ ಎ ಮೊಹಮ್ಮದ್ ಮುಸ್ಕಾಖ್ ಹೇಳಿದರು. ಇದೀಗ ಎದ್ದಿರುವ ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಕೇರಳ ಹೈಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮುಂದಿಟ್ಟುಕೊಂಡು ವಾದ ಮಂಡಿಸಿದೆ.