ಮುಂಬೈ: ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪ್ಯಾಂಡಮಿಕ್ ಪೀಡಿತ 2022 ನೇ ಆರ್ಥಿಕ ವರ್ಷದಲ್ಲಿ ಬರೊಬ್ಬರಿ 227 ಬಿಲಿಯನ್ ಡಾಲರ್ ಮೌಲ್ಯವನ್ನು ದಾಟಿದೆ.
ನಾಸ್ಕಾಮ್ ಫೆ.15 ರಂದು ನೀಡಿರುವ ಹೇಳಿಕೆಯ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಐಟಿ ಉದ್ಯಮ ಶೇ.15.5 ರಷ್ಟು ಬೆಳವಣಿಗೆ ದಾಖಲಿಸಿದೆ.
ನಾಸ್ಕಾಮ್ ನ ಪ್ರಕಾರ ಶೇ.15.5 ರಷ್ಟು ಬೆಳವಣಿಗೆ ದಶಕದಲ್ಲೇ ಅತಿ ಹೆಚ್ಚಿನ ಬೆಳವಣಿಗೆಯಾಗಿದ್ದು, ಐಟಿ ಕ್ಷೇತ್ರದ ಆದಾಯ ಪ್ಯಾಂಡಮಿಕ್ ನಂತರದ ಪರಿಣಾಮಗಳಿಂದ ಚೇತರಿಸಿಕೊಂಡಿದ್ದು ಪುಟಿದೆದ್ದಿದೆ ಎನ್ನುತ್ತಾರೆ ನಾಸ್ಕಾಮ್ ನ ಅಧ್ಯಕ್ಷ ದೇಬ್ಜಾನಿ ಘೋಷ್. 2021 ರ ಆರ್ಥಿಕ ವರ್ಷದಲ್ಲಿ ಐಟಿ ಉದ್ಯಮದ ಆದಾಯ ಶೇ.2.3 ರಷ್ಟು ಬೆಳವಣಿಗೆ (194 ಬಿಲಿಯನ್ ಅಮೆರಿಕನ್ ಡಾಲರ್) ದಾಖಲಿಸಿತ್ತು.
ವಾರ್ಷಿಕ ಕಾರ್ಯತಂತ್ರದ ಅವಲೋಕನದಲ್ಲಿ ನಾಸ್ಕಾಮ್, ಐಟಿ ಕ್ಷೇತ್ರದಲ್ಲಿ ಹೊಸದಾಗಿ 4.5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆಯ 50 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ ನೇಮಕಗೊಂಡವರ ಪೈಕಿ ಶೇ.44 ರಷ್ಟು ಮಹಿಳೆಯರು ಇದ್ದು ಒಟ್ಟು ಸಂಖ್ಯೆ 18 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.
ಐಟಿ ರಫ್ತು ಶೇ.17.2 ರಷ್ಟಕ್ಕೆ ಬೆಳವಣಿಗೆಯಾಗಿದ್ದು, 178 ಬಿಲಿಯನ್ ಡಾಲರ್ ಗೆ ತಲುಪಿದೆ, ದೇಶೀಯ ಆದಾಯ ಶೇ.10 ರಷ್ಟು ಅಂದರೆ 49 ಬಿಲಿಯನ್ ಡಾಲರ್ ಗೆ ತಲುಪಿದೆ ಎನ್ನುತ್ತಿದೆ ನಾಸ್ಕಾಮ್. "ನವಯುಗದ ಡಿಜಿಟಲ್ ಸೇವೆಗಳ ಪಾಲು ಶೇ.25 ರಷ್ಟು ಬೆಳವಣಿಗೆ ಕಂಡಿದ್ದು (13 ಬಿಲಿಯನ್ ಡಾಲರ್) ಭಾರತ ಭವಿಷ್ಯತ್ ನಲ್ಲಿ ಉಪಯುಕ್ತವಾಗುವ ಬಲಿಷ್ಠ ಕಾರ್ಮಿಕ ಶಕ್ತಿಯನ್ನು ಹೊಂದಿದೆ" ಎಂದು ಘೋಷ್ ತಿಳಿಸಿದ್ದಾರೆ.