ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್-2022 (Union Budget 2022) ದೇಶದ ವಿಶಾಲತೆಯನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತವಾಗಿ ವಿವರಿಸಿದ್ದಾರೆ. ಅದರ ಪ್ರಮುಖ ಅಂಶಗಳನ್ನು ನಾನು ನೋಡುತ್ತಿದ್ದೇನೆ, ಇಂದಿನ ಪರಿಸ್ಥಿತಿಗೆ ಸಂದರ್ಭೋಚಿತವಾದ ಉತ್ತಮ ಬಜೆಟ್ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಬಜೆಟ್-2022ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಲೋಕಸಭೆಯಲ್ಲಿ ಮಂಡಿಸಿದ ನಂತರ ಇಂದು ಬಿಜೆಪಿ ಕಾರ್ಯಕರ್ತರು ಮತ್ತು ಸಚಿವರನ್ನು ಹಾಗೂ ದೇಶವಾಸಿಗಳನ್ನು ಉದ್ದೇಶಿಸಿ "ಆತ್ಮನಿರ್ಭರ ಭಾರತ - ಅರ್ಥವ್ಯವಸ್ಥೆ" ವರ್ಚುವಲ್ ಭಾಷಣ ಮಾಡಿದ ಪ್ರಧಾನ ಮಂತ್ರಿ ಮೋದಿ, 7 ವರ್ಷಗಳ ಹಿಂದೆ ಭಾರತದ ಜಿಡಿಪಿ 1 ಲಕ್ಷದ 10 ಸಾವಿರ ಕೋಟಿಯಿದ್ದಿತ್ತು. ಇಂದು ಅದು 2 ಲಕ್ಷದ 30 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ 630 ಬಿಲಿಯನ್ ಡಾಲರ್ ನಿಂದ 200 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇವೆಲ್ಲವೂ ಸಾಧ್ಯವಾಗಿದ್ದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಸಾಮೂಹಿಕ ಯೋಜನೆಗಳಿಂದ ಎಂದು ಹೇಳಿದರು.
ಆಧುನಿಕ, ಸ್ವಾವಲಂಬಿ ಭಾರತ ನಿರ್ಮಾಣ ಅಗತ್ಯ: ಸ್ವಾವಲಂಬಿ ಮತ್ತು ಆಧುನಿಕ ಭಾರತ ನಿರ್ಮಾಣ ಬಹಳ ಮುಖ್ಯವಾಗಿದೆ. ಭಾರತವನ್ನು ಆಧುನಿಕತೆಯ ದಿಕ್ಕಿನಲ್ಲಿ ಮುನ್ನಡೆಸಲು ಈ ಬಜೆಟ್ ಹಲವಾರು ಪ್ರಮುಖ ನಿಬಂಧನೆಗಳನ್ನು ಹೊಂದಿದೆ. ಕಳೆದ 7 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಭಾರತದ ಆರ್ಥಿಕತೆ ನಿರಂತರವಾಗಿ ವಿಸ್ತರಿಸುತ್ತಿದೆ ಎಂದರು.
ಕೋವಿಡ್ ಸಾಂಕ್ರಾಮಿಕದ ನಂತರ ವಿಶ್ವದಲ್ಲಿ ಹಲವು ಬದಲಾವಣೆಗಳಾಗಿವೆ. ಇಂದು ಭಾರತವನ್ನು ನೋಡುವ ಪ್ರಪಂಚದ ದೃಷ್ಟಿಕೋನವು ಬಹಳಷ್ಟು ಬದಲಾಗಿದೆ. ಈಗ, ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ ಎಂದರು.
ಕೇಂದ್ರ ಬಜೆಟ್ 2022ರಲ್ಲಿ ಘೋಷಣೆಯಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳನ್ನು, ಕೃಷಿ, ಗ್ರಾಮೀಣ ವ್ಯವಸ್ಥೆ, ಅರ್ಥ ವ್ಯವಸ್ಥೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದ ಪ್ರಧಾನಿ ಮೋದಿ, ಸಾವಯವ ಕೃಷಿಯತ್ತ ಗಮನಹರಿಸಿ ಭಾರತೀಯ ಕೃಷಿಯನ್ನು ಆಧುನೀಕರಿಸುವ ಬಗ್ಗೆಯೂ ಬಜೆಟ್ ಗಮನಹರಿಸಿದೆ. ಇದರಿಂದ ಕೃಷಿ ಲಾಭದಾಯಕವಾಗಲಿದೆ. ಕಿಸಾನ್ ಡ್ರೋನ್‌ಗಳು ಮತ್ತು ಇತರ ಯಂತ್ರೋಪಕರಣಗಳು ರೈತರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಬಜೆಟ್ ನಲ್ಲಿನ ಅಂಶಗಳನ್ನು ಸಮರ್ಥಿಸುತ್ತಾ ಹೋದರು. ಆ ಮೂಲಕ ತಮ್ಮ ಸರ್ಕಾರ ಮಾಡುತ್ತಿರುವ ಕೆಲಸಗಳನ್ನು ದೇಶದ ಜನರ ಮುಂದಿಡಲು ಪ್ರಯತ್ನಿಸಿದರು.
ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೂ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ. ಗಡಿಯಲ್ಲಿರುವ ಶಾಲೆಗಳಲ್ಲಿ ಎನ್‌ಸಿಸಿ ಕೇಂದ್ರಗಳನ್ನು ತರಲಾಗುವುದು ಎಂದರು.
ಪ್ರಧಾನಿ ಭಾಷಣದ ಮುಖ್ಯಾಂಶಗಳು:
- ದೇಶದ ಬಡ, ಮಧ್ಯಮ ವರ್ಗದ ಮತ್ತು ಯುವಜನಾಂಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೇಂದ್ರ ಬಜೆಟ್-2022ರ ಆದ್ಯತೆಯಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣ ಅತ್ಯಗತ್ಯವಾಗಿದೆ.
- ಕೋವಿಡೋತ್ತರದಲ್ಲಿ ಜಗತ್ತು ಹೊಸತರತ್ತ ತೆರೆದುಕೊಳ್ಳುತ್ತಿದ್ದು ಅದರ ಆರಂಭಿಕ ಸೂಚನೆ ಕಾಣುತ್ತಿದೆ. ಜಗತ್ತು ಭಾರತವನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ಜಗತ್ತಿನಲ್ಲಿ ಜನರು ಬಲಿಷ್ಠ ಮತ್ತು ಸಶಕ್ತ ಭಾರತವನ್ನು ನೋಡಲು ಬಯಸುತ್ತಿದ್ದಾರೆ. ವೇಗವಾಗಿ ನಾವು ದೇಶವನ್ನು ಮುನ್ನಡೆಸಬೇಕಾಗಿದ್ದು ಹಲವು ವಲಯಗಳಲ್ಲಿ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.
- ಭಾರತ ಸ್ವಾವಲಂಬನೆಯತ್ತ ಸಾಗಬೇಕಾಗಿದ್ದು, ಆತ್ಮನಿರ್ಭರ ಭಾರತದ ಅಡಿಯಲ್ಲಿ ನವಭಾರತ ನಿರ್ಮಾಣವಾಗಬೇಕಿದೆ.
- ನಿನ್ನೆ ಮಂಡನೆಯಾದ ಬಜೆಟ್ ನ್ನು ರಾಜಕೀಯ ದೃಷ್ಟಿಕೋನ ಹೊರತುಪಡಿಸಿ ಬೇರೆಲ್ಲಾ ಜನರು ಎಲ್ಲಾ ವರ್ಗದವರು ಸ್ವಾಗತಿಸಿದ್ದಾರೆ. ಈ ಬಜೆಟ್ ಬಡವರು, ಮಧ್ಯಮ ವರ್ಗದವರು ಮತ್ತು ಯುವಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನಹರಿಸುತ್ತದೆ, ತಮ್ಮ ಸರ್ಕಾರವು ಮೂಲ ಸೌಕರ್ಯಗಳ ಸಂತೃಪ್ತಿಗಾಗಿ ಕೆಲಸ ಮಾಡುತ್ತಿದೆ.
- ಗಡಿ ಗ್ರಾಮಗಳಿಂದ ವಲಸೆ ಬರುವುದು ರಾಷ್ಟ್ರೀಯ ಭದ್ರತೆಗೆ ಒಳ್ಳೆಯದಲ್ಲ. ಗಡಿಯಲ್ಲಿ 'ಚೈತನ್ಯದಾಯಕ ಗ್ರಾಮ'ಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅವಕಾಶವಿದೆ.
- ಕಳೆದ ಏಳು ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳು ಭಾರತದ ಆರ್ಥಿಕತೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ.ಕಳೆದ 7-8 ವರ್ಷಗಳ ಹಿಂದೆ ಭಾರತದ ಜಿಡಿಪಿ 1.10 ಲಕ್ಷ ಕೋಟಿ ರೂಪಾಯಿ ಇದ್ದಿದ್ದು, ಇಂದು ನಮ್ಮ ಜಿಡಿಪಿ ಸುಮಾರು 2.3 ಲಕ್ಷ ಕೋಟಿ ರೂಪಾಯಿಗಳಾಗಿದೆ.
- ಒಟ್ಟಾರೆಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು "ಜನ ಸ್ನೇಹಿ, ಪ್ರಗತಿಪರ" ಮತ್ತು ಮೂಲಸೌಕರ್ಯ, ಹೂಡಿಕೆ, ಬೆಳವಣಿಗೆ ಮತ್ತು ಉದ್ಯೋಗಗಳ ಸಾಧ್ಯತೆಗಳನ್ನು ನೀಡುವ ಬಜೆಟ್ ನ್ನು ಮಂಡಿಸಿದ್ದಾರೆ.
- ನಿನ್ನೆ ಕೇಂದ್ರ ಬಜೆಟ್ -2022ನ್ನು ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 39.45 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ನ್ನು ಮಂಡಿಸಿದ್ದಾರೆ.
- ಗಂಗಾ ನದಿಯ ದಡದಲ್ಲಿ 2,500-ಕಿಮೀ ಉದ್ದದ ನೈಸರ್ಗಿಕ ಕೃಷಿ ಕಾರಿಡಾರ್ ಅನ್ನು ಬಜೆಟ್ ನಲ್ಲಿ ಕಲ್ಪಿಸಲಾಗಿದೆ. ಇದು ಗಂಗಾ ಸ್ವಚ್ಛತೆ ಮಿಷನ್ ಗೆ ಸಹಾಯ ಮಾಡುತ್ತದೆ.