ಕೊಲ್ಕತ್ತಾ: ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.ಈ ಮೂಲಕ 1-0 ಅಂತರದಿಂದ ಸರಣಿಯಲ್ಲಿ ಮುಂದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ನಿಕೋಲಸ್ ಪೂರನ್ (61) ಕೈಲ್ ಮೇಯರ್ಸ್ (31) ಕಿರಾನ್ ಪೊಲಾರ್ಡ್ ಅಜೇಯ 24 ರನ್ ಗಳಿಸುವ ಮೂಲಕ ತಂಡ 150 ರ ಗಡಿ ದಾಟಲು ನೆರವಾದರು.
ಭಾರತದ ಪರ ರವಿ ಬಿಷ್ಟೋಯಿ 2, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದರು.ವೆಸ್ಟ್ ಇಂಡೀಸ್ ನೀಡಿದ್ದ 157 ರನ್ ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕುವ ಮೂಲಕ ಗೆಲುವಿನ ನಗೆ ಬೀರಿತು.
ಭಾರತದ ಪರ ನಾಯಕ ರೋಹಿತ್ ಶರ್ಮಾ 40, ಇಶಾನ್ ಕಿಶಾನ್ 35, ವಿರಾಟ್ ಕೊಹ್ಲಿ 17, ರಿಷಭ್ ಪಂತ್ 8 ಹಾಗೂ ಸೂರ್ಯ ಕುಮಾರ್ ಯಾದವ್ ಅಜೇಯ 34, ವೆಂಕಟೇಶ್ ಅಯ್ಯರ್ ಅಜೇಯ 24 ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಅಸರೆಯಾದರು.