ಲಖನೌ: ಸತತ 26 ವರ್ಷಗಳಿಂದ ಭೂ ಹಗರಣದ ವಿರುದ್ಧ ಧರಣಿ ನಡೆಸುತ್ತಿರುವ ಮಾಜಿ ಶಿಕ್ಷಕರೊಬ್ಬರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿರುದ್ಧ ಸ್ಪರ್ಧಿಸುತ್ತಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.
ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಡುವೆ ಅಧಿಕಾರಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದೀಗ ವಿಜಯ್ ಸಿಂಗ್ ಎಂಬ ಮಾಜಿ ಶಿಕ್ಷಕ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಇವರಿಬ್ಬರಿಗೆ ಪ್ರತಿಸ್ಪರ್ಧಿಯಾಗಲಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ವಿರುದ್ಧ ಗೋರಖ್ ಪುರ ನಗರದಿಂದ ಚುನಾವಣೆಗೆ ಸ್ಪರ್ಧಿಸಿದರೆ, ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ವಿರುದ್ಧ ಪ್ರಚಾರ ಕೈಗೊಳ್ಳುವುದಾಗಿ ಮಾಜಿ ಶಿಕ್ಷಕ ಹೇಳಿದ್ದಾರೆ.
ವಿಜಯ್ ಸಿಂಗ್ ಭ್ರಷ್ಟಾಚಾರ ವಿರೋಧಿ ಹೋರಾಟಗಾರನಾಗಿದ್ದು, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಭೂಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಜಾಫರ್‌ನಗರದಲ್ಲಿ 26 ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದೇನೆ. ಫೆಬ್ರವರಿ 9ರಂದು ಗೋರಖ್ ಪುರ ನಗರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಕಳೆದ 26 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ ಯಾವುದೇ ಪಕ್ಷವು ಭ್ರಷ್ಟಾಚಾರ ಮತ್ತು ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ವಿಜಯ್ ಸಿಂಗ್ ಹೇಳಿದ್ದಾರೆ.