ಕುಂಬಳೆ: ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆ ಗ್ರಾಮರಾಜ್ಯ ಗ್ರಾಮೀಣ ಜನರ ವರವಾಗಿ, ಆಶಾಕಿರಣವಾಗಿ ಬೆಳೆಯಲಿ ಆ ಮೂಲಕ ಬಡರೈತರು ಸಾವಯವ ಕೃಷಿಯನ್ನೇ ಅವಲಂಬಿಸುವಂತಾಗಲಿ ಅವರ ಉತ್ಪಾದನೆಗೆ ಸೂಕ್ತ ಬೆಲೆ ಸಿಗುವಂತಾಗಲಿ ಎಂದು ಮಂಜೇಶ್ವರ ಶಾಸಕರಾದ ಎಕೆಎಂ ಅಶ್ರಫ್ ಅವರು ನುಡಿದರು.
ಕುಂಬಳೆಯಲ್ಲಿ ಗ್ರಾಮರಾಜ್ಯ ಸಂಸ್ಥೆಯ 27ನೆಯ ಅಧಿಕೃತ ಮಾರಾಟ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ತಾನು ಬಹುತೇಕ ಸ್ವದೇಶೀ ವಸ್ತುಗಳನ್ನೇ ಬಳಸಲು ಸದಾ ಪ್ರಯತ್ನಿಸುವ ವ್ಯಕ್ತಿ. ಸ್ವದೇಶೀ ಸಾವಯವ ಉತ್ಪನ್ನಗಳ ಮಾರಾಟ ಕೇಂದ್ರವೊಂದು ಮಂಜೇಶ್ವರ ಮಂಡಲದ ಕುಂಬಳೆಯಲ್ಲಿ ಆರಂಭವಾಗುವುದರ ಮೂಲಕ ಜನರಿಗೆ ರಾಸಾಯನಿಕ ವಸ್ತು ಮುಕ್ತವಾದ ಅಕ್ಕಿ, ಸಕ್ಕರೆ, ಬೆಲ್ಲ, ಬೇಳೆಕಾಳುಗಳೇ ಮೊದಲಾದುವುಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೇರಳದಲ್ಲಿ ಗ್ರಾಮರಾಜ್ಯದ ಮೊತ್ತಮೊದಲ ಫ್ರಾಂಚೈಸ್ ಆಗಿ ಈ ಕೇಂದ್ರವು ಮೂಡಿ ಬರುತ್ತಿರುವುದು ಈ ಪ್ರದೇಶದ ಸಾವಿರಾರು ಜನರ ಪ್ರತಿನಿಧಿ ಎಂಬ ನೆಲೆಯಲ್ಲಿ ಹೆಮ್ಮೆಯಿದೆ. ಇದು ಕೇರಳದಾದ್ಯಂತ ಪಸರಿಸಲಿ ಎಂದು ಅವರು ಹಾರೈಸಿದರು.
ಗ್ರಾಮರಾಜ್ಯ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ ಅಮ್ಮಂಕಲ್ಲು ಅವರು ಸಾವಯವ ವಸ್ತುಗಳಿಗೂ ಇತರ ವಸ್ತುಗಳಿಗೂ ಇರುವ ವ್ಯತ್ಯಾಸವನ್ನೂ ಆರೋಗ್ಯದ ದೃಷ್ಟಿಯಿಂದ ಸಾವಯವ ವಸ್ತುಗಳ ಬಳಕೆಯಿಂದಾಗುವ ಪ್ರಯೋಜನಗಳನ್ನೂ ವಿವರಿಸಿದರು.
ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷೆ ತಾಹಿರ ಯೂಸುಫ್, ಪಂಚಾಯತು ಸದಸ್ಯೆ ವಿದ್ಯಾ ಎನ್ ಪೈ, ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನ್ಯಾಯವಾದಿ ಸದಾನಂದ ಕಾಮತ್, ಹವ್ಯಕ ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಹವ್ಯಕ ಕುಂಬಳೆ ವಲಯ ಅಧ್ಯಕ್ಷ ಡಾ. ಡಿ. ಪುರುಷೋತ್ತಮ ಭಟ್, ಕಾರ್ಯದರ್ಶಿ ಎಸ್ ಗೋಪಾಲಕೃಷ್ಣ ಭಟ್, ಗ್ರಾಮರಾಜ್ಯದ ಮಾರಾಟ ವಿಭಾಗ ಸಂಚಾಲಕ ಸುದರ್ಶನ ಶುಭಹಾರೈಸಿದರು.
ಕುಂಬಳೆ ಗ್ರಾಮ ಪಂಚಾಯತಿನ ಮಾಜಿ ಸದಸ್ಯ ಮುರಳೀಧರ ಯಾದವ್ ಸ್ವಾಗತಿಸಿ, ಪೇರಾಲು ಶಾಲಾ ಪಿಟಿಎ ಅಧ್ಯಕ್ಷ ಮೊಹಮ್ಮದ್ ಬಿಎ ಪೇರಾಲ್ ವಂದಿಸಿದರು. ಗ್ರಾಮರಾಜ್ಯ ಕುಂಬಳೆ ಕೇಂದ್ರದ ಸಂಚಾಲಕ ಗುರುಮೂರ್ತಿ ಮೇಣ ಮತ್ತು ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.