ತಿರುವನಂತಪುರ: ಕೊರೊನಾ ವಿಸ್ತರಣೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಭಾನುವಾರದಂದು ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ನಿನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಒಂದರಿಂದ ಒಂಭತ್ತನೇ ತರಗತಿ ವರೆಗಿನ ಶಾಲೆಗಳಲ್ಲಿ ಸೋಮವಾರದಿಂದ ತರಗತಿಗಳು ಪುನರಾರಂಭಗೊಳ್ಳಲಿವೆ. ಈ ತಿಂಗಳ 28 ರಿಂದ ಎಂದಿನಂತೆ ಸಂಜೆಯವರೆಗೆ ತರಗತಿಗಳು ನಡೆಯಲಿವೆ. ಶಾಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದರು. ಪರೀಕ್ಷೆಯ ಮೊದಲು ಪಾಠಗಳನ್ನು ಪೂರ್ಣಗೊಳಿಸಬೇಕೆಮದು ಸೂಚಿಸಲಾಗಿದೆ.
ಉತ್ಸವಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಅಟ್ಟುಕ್ಕಾಲ್ ಪೊಂಗಾಲ, ಮರಮನ್ ಕನ್ವೆನ್ಷನ್ ಮತ್ತು ಆಲುವಾ ಶಿವರಾತ್ರಿಗೆ ವಿಶೇಷ ನಿಯಮಾವಳಿಗಳನ್ನು ಹೊರಡಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರ ಮಲಬಾರಿನಲ್ಲಿ ಫೆಬ್ರವರಿ ತಿಂಗಳು ಹಬ್ಬಗಳ ತಿಂಗಳು. ಹೆಚ್ಚಿನ ಜನರು ಪಾಲ್ಗೊಳ್ಳಲು ನಿಯಂತ್ರಣ ಸಡಿಲಿಸಲಾಗುವುದು.
ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೊರೊನಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಸಕಾಲಕ್ಕೆ ಹಾಜರಾಗದೆ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಗಮನಹರಿಸಬೇಕು. ಚಿಂತಾಜನಕ ಸ್ಥಿತಿಯಲ್ಲಿರುವವರನ್ನೂ ಹಿರಿಯ ವೈದ್ಯರಿಂದ ತಪಾಸಣೆ ಮಾಡಿಸಬೇಕು ಎಂದು ಈ ಹಿಂದೆ ನಿರ್ಧರಿಸಲಾಗಿತ್ತು. ಇದನ್ನು ಅನುಷ್ಠಾನಗೊಳಿಸುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದರು.