ಕೋಲ್ಕತ್ತ: ಪಶ್ಚಿಮ ಬಂಗಾಳಕ್ಕೆ ಕೇಂದ್ರ ವಿಸ್ತೃತ ಅಭಿವೃದ್ಧಿ ಯೋಜನೆಗಳನ್ನು ಹೊಂದಿದ್ದು ಈ ಪೈಕಿ ಕೋಲ್ಕತ್ತಾಗೆ 2 ನೇ ವಿಮಾನ ನಿಲ್ದಾಣದ ಯೋಜನೆಯೂ ಇದೆ. ಆದರೆ ಇದಕ್ಕಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಭೂಮಿಯನ್ನು ಮಂಜೂರು ಮಾಡಿಲ್ಲ ಎಂದು ಪ್ರಯಾಣಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
"ಪ್ರಯಾಣಿಕ ವಿಮಾನಯಾನ ಇಲಾಖೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 2 ನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ 6 ತಿಂಗಳಿನಿಂದ ಸಮಯ ಕೇಳುತ್ತಿದೆ, ಆದರೆ ಈ ವರೆಗೂ ಪ್ರತಿಕ್ರಿಯೆ ಬಂದಿಲ್ಲ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದ್ದರಿಂದ ಕೋಲ್ಕತ್ತಾದಲ್ಲಿ 2 ನೇ ವಿಮಾನ ನಿಲ್ದಾಣ ನಿರ್ಮಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ" ಎಂದು ಸಚಿವರು ಹೇಳಿದ್ದಾರೆ.
ಹೊಸ ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡುವ ವಿಷಯವಾಗಿ ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರಗಳನ್ನು ಬರೆಯಲಾಗಿದೆ ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಿರುವ ಎನ್ ಎಸ್ ಸಿಬಿಐ ವಿಮಾನ ನಿಲ್ದಾಣಕ್ಕೆ ನಾವು 700 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಹೊಸ ತಾಂತ್ರಿಕ ಬ್ಲಾಕ್ ಹಾಗೂ ಕಂಟ್ರೋಲ್ ಟವರ್ ನ್ನು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹೊಸ ಟ್ಯಾಕ್ಸಿ ವೇ ನ್ನು 265 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.