ನವದೆಹಲಿ: ಕಳೆದ ವರ್ಷ ದೇಶದಲ್ಲಿ ಬಂದಿದ್ದ ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಗಂಗಾ ನದಿಯಲ್ಲಿ ಹರಿದ ಮೃತದೇಹಗಳ ಕುರಿತ ಪ್ರಶ್ನೆ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪವಾಯಿತು.
ಗಂಗಾನದಿಯಲ್ಲಿ ಎಷ್ಟು ಮೃತ ದೇಹಗಳನ್ನು ಚೆಲ್ಲಲಾಗಿದೆ ಎಂದು ಸರ್ಕಾರವನ್ನು ಪ್ರಶ್ನೆಯಲ್ಲಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಬಿಸ್ವೆವರ್ ತುಡು, ಅಂತಹ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸದಸ್ಯ ಡೆರೆಕ್ ಒಬ್ರೇನ್, ಶವವನ್ನು ಗಂಗಾನದಿಯಲ್ಲಿ ಎಸೆದಿರುವ ಬಗ್ಗೆ ಪ್ರಶ್ನೆ ಕೇಳಿದರು. ಪ್ರೋಟೋಕಾಲ್ ಪ್ರಕಾರ ಅವುಗಳನ್ನು ಹೊರತೆಗೆದ ನಂತರ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಏನು ವ್ಯವಸ್ಥೆ ಮಾಡಲಾಗಿದೆ ಎಂದು ಕೇಳಿದ್ದರು.
ಸಚಿವ ತುಡು ಅವರು ತಮ್ಮ ಲಿಖಿತ ಉತ್ತರದಲ್ಲಿ, “ಸುಟ್ಟ ಅಥವಾ ಭಾಗಶಃ ಸುಟ್ಟಿರುವ ಅಪರಿಚಿತ ಮತ್ತು ಗುರುತು ಸಿಗದ ದೇಹಗಳು ಗಂಗಾ ನದಿಯಲ್ಲಿ ಪತ್ತೆಯಾಗಿವೆ. ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಜಿಲ್ಲೆಗಳಲ್ಲಿ ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ನಂತರ, ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (NMCG) ಮತ್ತು ಜಲ ಶಕ್ತಿ ಸಚಿವಾಲಯ (MOJS) ಆಯಾ ರಾಜ್ಯಗಳಿಂದ ವರದಿ ಕೇಳಿದೆ. ಇದರೊಂದಿಗೆ ಈ ಮೃತ ದೇಹಗಳ ಸರಿಯಾದ ವಿಲೇವಾರಿ, ಅಂತ್ಯಕ್ರಿಯೆ ಇತ್ಯಾದಿಗಳಿಗೆ ರಾಜ್ಯಗಳಿಗೆ ಸೂಚನೆಗಳನ್ನು ನೀಡಲಾಯಿತು, ಇದರಿಂದ ಗಂಗಾ ನದಿಯ ಸಂರಕ್ಷಣೆ ಮಾಡಲಾಗಿದೆ.
ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮತ್ತು ಜಿಲ್ಲಾ ಗಂಗಾ ಸಮಿತಿಗಳಿಗೆ ಕೋವಿಡ್ ಪ್ರೋಟೋಕಾಲ್ ಪ್ರಕಾರ ಈ ದೇಹಗಳ ಅಂತಿಮ ವಿಧಿಗಳನ್ನು ನಡೆಸುವಂತೆ ಸಲಹೆ ನೀಡಲಾಯಿತು ಎಂದು ಸಚಿವರು ಹೇಳಿದರು.
ನಮಾಮಿ ಗಂಗೆ ಕಾರ್ಯಕ್ರಮದಡಿ ಮಾಧ್ಯಮ ಮತ್ತು ಪ್ರಚಾರ ಸೇರಿದಂತೆ ಸಂವಹನ ಮತ್ತು ಸಾರ್ವಜನಿಕ ಸಂಪರ್ಕಕ್ಕಾಗಿ 126 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸಚಿವರು ರಾಜ್ಯಸಭೆಗೆ ತಿಳಿಸಿದರು.