ಮುಂಬೈ: 300 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್‌ನ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್(ಪಿಎಂಎಲ್ ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯವು ಕೆಲವು ಷರತ್ತುಗಳ ಆಧಾರದ ಮೇಲೆ ಕಪೂರ್ ಗೆ ಜಾಮೀನು ನೀಡಿದೆ.
ರಾಣಾ ಕಪೂರ್ ದೇಶವನ್ನು ತೊರೆಯುವಂತಿಲ್ಲ ಮತ್ತು ಅವರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ನಿಗದಿತ ಎಲ್ಲಾ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಅವರು ₹ 5 ಲಕ್ಷ ರೂ. ತಾತ್ಕಾಲಿಕ ಶ್ಯೂರಿಟಿಯನ್ನೂ ಸಲ್ಲಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ದೆಹಲಿಯ ಪ್ರಮುಖ ಸ್ಥಳದಲ್ಲಿ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉದ್ಯಮಿ ಗೌತಮ್ ಥಾಪರ್ ಮತ್ತು ಇತರ ಏಳು ಮಂದಿಗೆ ಜಾಮೀನು ನೀಡಲಾಗಿದೆ. ಕಪೂರ್ ಮತ್ತು ಥಾಪರ್, ಕೆಲವು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರನ್ನು ಇನ್ನೂ ಬಿಡುಗಡೆ ಮಾಡಲಾಗುವುದಿಲ್ಲ.
ಪ್ರಸ್ತುತ ಪ್ರಕರಣವು ದೆಹಲಿಯ ಅಮೃತಾ ಶೆರ್ಗಿಲ್ ಮಾರ್ಗ್‌ನಲ್ಲಿರುವ ಆಸ್ತಿಯನ್ನು ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಒಡೆತನದ ಕಂಪನಿಗೆ ಮಾರಾಟ ಮಾಡಿದ ಆರೋಪಗಳಿಗೆ ಸಂಬಂಧಿಸಿದೆ. ಆ ಕಾರಣ ಕಳೆದ ವರ್ಷ ಮುಂಬೈನ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರತ್ಯೇಕ ಎಫ್‌ಐಆರ್ ದಾಖಲಿಸಿದೆ.
ನಂತರ, ಸಿಬಿಐನ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ (ಇಡಿ) ರಾಣಾ ಕಪೂರ್, ಬಿಂದು ಕಪೂರ್, ಗೌತಮ್ ಥಾಪರ್ ಮತ್ತು ಇತರ ಏಳು ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.