ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ 3,500 ಉತ್ತರ ಪತ್ರಿಕೆಗಳು ನಾಪತ್ತೆಯಾಗಿವೆ. ಪದವಿಯ ಎರಡನೇ ಸೆಮಿಸ್ಟರ್‍ನ ಉತ್ತರ ಪತ್ರಿಕೆಗಳು ಕಾಣೆಯಾಗಿವೆ. ಇವುಗಳ ಮೌಲ್ಯಮಾಪನ ಮೂರು ತಿಂಗಳ ಹಿಂದೆಯೇ ಮುಗಿದಿತ್ತು. ಪರೀಕ್ಷಾ ನಿಯಂತ್ರಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಉತ್ತರ ಪತ್ರಿಕೆಗಳನ್ನು ಕೂಡಲೇ ಪತ್ತೆ ಹಚ್ಚಿ ವಿತರಿಸುವಂತೆ ಸೂಚಿಸಿದ್ದಾರೆ.
ಮೌಲ್ಯಮಾಪನದ ನಂತರ ಅಂಕಗಳನ್ನು ಪಟ್ಟಿಗೆ ಸೇರಿಸಿದಾಗ ಸುಮಾರು 3,500 ಉತ್ತರ ಪತ್ರಿಕೆಗಳು ಕಾಣೆಯಾಗಿವೆ ಎಂದು ಅಧಿಕಾರಿಗಳು ಕಂಡುಕೊಂಡರು. ಈ ಬಗ್ಗೆ ಯಾರಿಗೂ ತಿಳಿಸದೆ ಉತ್ತರ ಪತ್ರಿಕೆ ಹುಡುಕಲು ವಿಶ್ವವಿದ್ಯಾಲಯ ನಡೆಸಿದ ಅನಧಿಕೃತ ಪ್ರಯತ್ನ ವಿಫಲವಾಗಿದೆ.
ಮೌಲ್ಯಮಾಪನ ಮುಗಿದು ಮೂರು ತಿಂಗಳಾದರೂ ಫಲಿತಾಂಶ ಪ್ರಕಟವಾಗದ ಹಿನ್ನೆಲೆಯಲ್ಲಿ ಪರೀಕ್ಷಾ ನಿಯಂತ್ರಕರು ಮಧ್ಯ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ಉತ್ತರ ಪತ್ರಿಕೆ ನಾಪತ್ತೆಯಾಗಿರುವ ಮಾಹಿತಿ ಹೊರಜಗತ್ತಿಗೆ ತಿಳಿಯಿತು. ಪರೀಕ್ಷೆ ಬರೆದು ತಿಂಗಳುಗಳು ಕಳೆದರೂ ಫಲಿತಾಂಶ ಬಾರದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮೌಲ್ಯಮಾಪನ ವಿಳಂಬವಾಗುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಂಡರೂ ಪರೀಕ್ಷೆಯ ಫಲಿತಾಂಶವನ್ನು ವಿಶ್ವವಿದ್ಯಾಲಯ ಪ್ರಕಟಿಸುವ ಸ್ಥಿತಿಯಲ್ಲಿಲ್ಲ.
ಒಂದು ವರ್ಷದ ಹಿಂದೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸೇರಿದಂತೆ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ಫಲಿತಾಂಶ ಬಾರದ ಕಾರಣ ಪೂರಕ ಪರೀಕ್ಷೆ ಬರೆದವರ ಮುಂದಿನ ಅಧ್ಯಯನವೂ ಬಿಕ್ಕಟ್ಟಿನಲ್ಲಿದೆ.