ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಎರಡೂ ರಾಷ್ಟ್ರಗಳ ಮಧ್ಯೆದ ಈ ಯುದ್ಧ, ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹೋರಾಟ ಜನಸಾಮಾನ್ಯರ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದಿಯೋ.. ಅದಕ್ಕಿಂತ ಹೆಚ್ಚಾಗಿ ಶ್ರೀಮಂತರಿಗೂ ಭಾರೀ ನಷ್ಟ ಉಂಟು ಮಾಡುತ್ತಿದೆ.
ವರದಿಯೊಂದರ ಪ್ರಕಾರ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಮೇಲೆ ಮಿಲಿಟರಿ ಕ್ರಮ ಘೋಷಿಸಿದ ತಕ್ಷಣ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ನಿರ್ಬಂಧ ಹೇರಲು ಆರಂಭಿಸಿದವು. ಇದರಿಂದಾಗಿ ರಷ್ಯಾ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಭಾರಿ ಕುಸಿತ ಉಂಟಾಗಿದೆ. ರಷ್ಯಾದ ಬಿಲಿಯನೇರ್ ಗಳು ಒಂದೇ ದಿನದಲ್ಲಿ 39 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿದ್ದಾರೆ.
ರಷ್ಯಾ ಷೇರು ಮಾರುಕಟ್ಟೆ ಕುಸಿತ: ಷೇರುಪೇಟೆಯಲ್ಲಿನ ಈ ಭಾರಿ ನಷ್ಟವು ದೇಶದ ಶ್ರೀಮಂತ ಜನರನ್ನು 24 ಗಂಟೆಯಲ್ಲಿ ಬೆಚ್ಚಿಬೀಳಿಸಿದೆ. ಇದರೊಂದಿಗೆ ಈ ಯುದ್ಧ ದೀರ್ಘ ಕಾಲ ನಡೆದರೆ ಇನ್ನೆಷ್ಟು ನಷ್ಟ ಅನುಭವಿಸಬೇಕೋ ಎಂಬ ಭಯ ಅವರನ್ನು ಕಾಡತೊಡಗಿದೆ. ದಾಳಿಯ ಸಮಯದಲ್ಲಿ ಗುರುವಾರದಂದು ರಷ್ಯಾದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಐದನೇ ಅತಿದೊಡ್ಡ ಕುಸಿತ ಕಂಡಿತು. ರಷ್ಯಾದ ಬೆಂಚ್ ಮಾರ್ಕ್ MOEX ಸೂಚ್ಯಂಕವು ಶೇ. 33ರಷ್ಟು ಕುಸಿತದೊಂದಿಗೆ ಮುಕ್ತಾಯ ಕಂಡಿತು.
“ಬ್ಲ್ಯಾಕ್ ಮಂಡೇ”ಗಿಂತ ಹೆಚ್ಚು ಕೆಟ್ಟ ಸ್ಥಿತಿ: ಸ್ಟಾಕ್ ಮಾರುಕಟ್ಟೆಯು ಕುಸಿತಗೊಂಡಿದ್ದರಿಂದ ರಷ್ಯಾದ ಕರೆನ್ಸಿ ರೂಬಲ್ ತನ್ನ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. ರಷ್ಯಾ ಇತಿಹಾಸದ ಪ್ರಕಾರ 1987ರ “ಬ್ಲ್ಯಾಕ್ ಮಂಡೇ” ಅತ್ಯಂತ ಕೆಟ್ಟ ದಿನ. ಅಂದು ಹೂಡಿಕೆದಾರರು $50 ಶತಕೋಟಿಗಿಂತ ಹೆಚ್ಚಿನ ಹಣ ಕಳೆದುಕೊಂಡು ಬೀದಿಗೆ ಬಂದಿದ್ದರು. ರಷ್ಯಾದ ಷೇರು ಮಾರುಕಟ್ಟೆಯಲ್ಲಿನ ಈ ಭಾರಿ ನಷ್ಟ ದೇಶದ ಷೇರು ಸೂಚ್ಯಂಕ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿದೆ.
2ನೇ ಮಹಾಯುದ್ಧದ ಬಳಿಕ ಕೆಟ್ಟ ಸ್ಥಿತಿ: ಎರಡನೆಯ ಮಹಾಯುದ್ಧದ ಬಳಿಕ ಯುರೋಪ್ ನಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟಾಗಿದ್ದು, ಷೇರು ಮಾರುಕಟ್ಟೆಗಳು ನೆಲಕಚ್ಚತೊಡಗಿವೆ. ಉಕ್ರೇನ್‌ನೊಂದಿಗಿನ ಬಿಕ್ಕಟ್ಟು ರಷ್ಯಾದ ಮೇಲೆ ಭಾರಿ ಪರಿಣಾಮ ಉಂಟು ಮಾಡಿದ್ದು, ಅಮೆರಿಕ ಸೇರಿದಂತೆ ಹಲವು ಬಲಾಢ್ಯ ರಾಷ್ಟ್ರಗಳು ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ರಷ್ಯಾದ ಕೋಟ್ಯಾಧಿಪತಿಗಳು ಸಾಕಷ್ಟು ನಷ್ಟ ಎದುರಿಸುತ್ತಿದ್ದಾರೆ. ರಷ್ಯಾ-ಉಕ್ರೇನ್ ವಿವಾದದಿಂದಾಗಿ ದೇಶದ ಪ್ರಮುಖ 23 ಬಿಲಿಯನೇರ್‌ಗಳ ಸಂಪತ್ತಿನಲ್ಲಿ 32 ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾಗಿದೆ ಎಂದು ವರದಿಗಳು ಹೇಳಿವೆ.
ಬಿಲಿಯನೇರ್‌ಗಳಿಗೆ ದೊಡ್ಡ ಹೊಡೆತ: ವರದಿಯೊಂದರ ಪ್ರಕಾರ ಲುಕೋಯಿಲ್ ಅಧ್ಯಕ್ಷ ವಾಗಿತ್ ಅಲೆಪೆರೋವ್ ಒಂದು ದಿನದಲ್ಲಿ ಅತಿದೊಡ್ಡ ನಷ್ಟ ಅನುಭವಿಸಿದ್ದಾರೆ. ಅವರ ನಿವ್ವಳ ಮೌಲ್ಯವು ಒಂದೇ ದಿನದಲ್ಲಿ ಮೂರನೇ ಒಂದು ಭಾಗದಷ್ಟು ಕುಸಿತ ಕಂಡಿದೆ. ಅಂದರೆ ಸುಮಾರು $6.2 ಬಿಲಿಯನ್ ಕಡಿಮೆಯಾಗಿದೆ. ಮಾಸ್ಕೋ ಮೂಲದ ತೈಲ ಉತ್ಪಾದಕರ ಷೇರುಗಳು ಗುರುವಾರ ಶೇಕಡಾ 33ರಷ್ಟು ಕುಸಿದಿವೆ. ಉಕ್ಕು ತಯಾರಕ ಸೆವೆರ್ಸ್ಟಾಲ್ನ ಅಧ್ಯಕ್ಷ ಅಲೆಕ್ಸಿ ಮೊರ್ಡಾಶೋವ್ $4.2 ಶತಕೋಟಿ ಕಳೆದುಕೊಂಡಿದ್ದಾರೆ. ಇವರ ಸಂಪತ್ತಿನಲ್ಲಿ $23 ಶತಕೋಟಿ ಮಾತ್ರ ಉಳಿದುಕೊಂಡಿದೆ. ಇದರ ನಂತರ, ನೊರಿಲ್ಸ್ಕ್ ನಿಕಲ್ ಅಧ್ಯಕ್ಷ ಮತ್ತು ಪ್ರಸ್ತುತ ರಷ್ಯಾದ ಅತಿದೊಡ್ಡ ಶ್ರೀಮಂತ ವ್ಲಾಡಿಮಿರ್ ಪೊಟಾನಿನ್ $3 ಬಿಲಿಯನ್ ಕಳೆದುಕೊಂಡಿದ್ದಾರೆ.