ನವದೆಹಲಿ: ಕೋವಿಡ್ 3ನೇ ಅಲೆಯಲ್ಲಿ ಕೊರೋನಾ ಸೋಂಕು ಮಾರ್ಚ್ ತಿಂಗಳಿನಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ದೇಶವನ್ನು ೨ನೇ ಹಾಗೂ ೩ನೇ ಅಲೆ ತೀವ್ರವಾಗಿ ಬಾಧಿಸುತ್ತಿರುವ ಬೆನ್ನಲ್ಲೆ ಸೋಂಕು ಮುಂದಿನ ತಿಂಗಳ ವೇಳೆಗೆ ಇಳಿಮುಖವಾಗುವ ಸೂಚನೆ ದೊರೆತಿದೆ. ಮಾರ್ಚ್ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್ ೩ನೇ ಅಲೆ ಇಳಿಮುಖವಾಗಲಿದ್ದು, ಅದಾಗ್ಯೂ ಮುಂಜಾಗ್ರತಾ ಕ್ರಮಗಳು ಮುಂದವರೆಯಬೇಕು ಎಂದು ಐಸಿಎಂಆರ್ ಸುಳಿವು ನೀಡಿದೆ.
ಈಗಾಗಲೇ ದೇಶದಲ್ಲಿ ೩ನೇ ಅಲೆ ಉಲ್ಬಣಗೊಂಡು ಇದೀಗ ಇಳಿಕೆಯತ್ತ ಸಾಗಿದೆ. ಇದು ಮುಂದಿನ ತಿಂಗಳ ವೇಳೆಗೆ ೩ನೇ ಅಲೆ ಇನ್ನಷ್ಟು ಇಳಿಕೆಯಾಗಲಿದೆ. ದೇಶದ ಕೆಲವು ಭಾಗಗಳಲ್ಲಿ ೩ನೇ ಅಲೆ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಐಸಿಎಂಆರ್‌ನ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಸಮೀರನ್ ಪಾಂಡ ಅವರು ಹೇಳಿದ್ದಾರೆ.
ಸೋಂಕು ಈ ತಿಂಗಳಾಂತ್ಯದ ವೇಳೆಗೆ ಮೂಲ ಮಟ್ಟಕ್ಕೆ ಇಳಿಯಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದ್ದು, ಮಾರ್ಚ್ ತಿಂಗಳಲ್ಲಿ ೩ನೇ ಅಲೆಯಿಂದ ಹೊರ ಬರಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ಕೋಪೆ ವಿಶ್ಲೇಷಿಸಿದ್ದಾರೆ. ಮುಂದಿನ ಮೂರು-ನಾಲ್ಕು ವಾರಗಳಲ್ಲಿ ದೇಶಾದ್ಯಂತ ಮೂರನೇ ಅಲೆ ಕೊನೆಗೊಳ್ಳುವ ನಿರೀಕ್ಷೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ ಚಂದ್ರಕಾಂತ್ ಲಹರಿ ತಿಳಿಸಿದ್ದಾರೆ.
ಒಮಿಕ್ರಾನ್ ರೂಪಾಂತರಿ ಸೋಂಕಿನ ಶೇ.೯೦ ರಷ್ಟು ಪ್ರಕರಣಗಳಲ್ಲಿ ಪ್ರಾಬಲ್ಯ ಹೊಂದಿದ್ದು ಮತ್ತು ಡೆಲ್ಟಾ ಕೇವಲ ಕೇವಲ ಶೇ.೧೦ ರಷ್ಟು ಇದೆ. ವಿಶ್ವದಾದ್ಯಂತ ಸೋಂಕಿನ ಏರಿಕೆ ಮತ್ತು ಕುಸಿತ ಕಾಣುತ್ತಿದೆ. ಐಸಿಎಂಆರ್‌ನ ಗಣಿತದ ಮಾದರಿ ಆಧಾರಿತ ಪ್ರೊಜೆಕ್ಷನ್ ಪ್ರಕಾರ, ಮೂರು ರಾಜ್ಯಗಳಲ್ಲಿನ ಪ್ರಕರಣಗಳ ಸಂಪೂರ್ಣ ಗರಿಷ್ಠ ಮತ್ತು ಕುಸಿತವನ್ನು ಈ ತಿಂಗಳೊಳಗೆ ನಿರೀಕ್ಷೆಮಾಡಲಾಗಿದೆ. ಐಸಿಎಂಆರ್ ಮತ್ತು ಇಂಪೀರಿಯಲ್ ಕಾಲೇಜ್ ಲಂಡನ್ ಅಭಿವೃದ್ಧಿಪಡಿಸಿದ ಮಾದರಿ ಈ ವರ್ಷದ ಮಾರ್ಚ್ ಮಧ್ಯದ ವೇಳೆಗೆ ಭಾರತ ಕೋವಿಡ್‌ನ ಸ್ಥಳೀಯ ಹಂತವನ್ನು ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ವೇಳೆ ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.