ಮಾಸ್ಕೋ: ರಷ್ಯಾವು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿದೆ. ಹೀಗಾಗಿ ಉಕ್ರೇನ್ ರಷ್ಯಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.
ದಾಳಿಯ ನಂತರ ರಷ್ಯಾದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಗುರುವಾರ ಘೋಷಿಸಿದ್ದಾರೆ.
ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸುವ ಮಾಸ್ಕೋದ ನಿರ್ಧಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಝೆಲೆನ್ಸ್ಕಿ ರಷ್ಯನ್ನರಿಗೆ ಮನವಿ ಮಾಡಿದರು. ರಷ್ಯಾದಲ್ಲಿ ಇನ್ನೂ ತಮ್ಮ ಆತ್ಮಸಾಕ್ಷಿಯನ್ನು ಕಳೆದುಕೊಳ್ಳದ ಎಲ್ಲರಿಗೂ, ಉಕ್ರೇನ್‌ನೊಂದಿಗಿನ ಯುದ್ಧದ ವಿರುದ್ಧ ಪ್ರತಿಭಟಿಸುವ ಸಮಯ” ಎಂದು ಉಕ್ರೇನಿಯನ್ ಅಧ್ಯಕ್ಷರು ಟ್ವಿಟರ್ ನಲ್ಲಿ ಬರೆದಿದ್ದಾರೆ.
ಈಗಾಗಲೇ ಉಕ್ರೇನ್ ರಷ್ಯಾದ 5 ವಿಮಾನ ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ. ಇನ್ನೂ ರಷ್ಯಾ ನಡೆಸಿದ ದಾಳಿಯಲ್ಲಿ 40 ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು ಡಜನ್ ಗೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಸಲಹೆಗಾರರು ತಿಳಿಸಿದ್ದಾರೆ.