ಮೋತಿಹಾರಿ: ಹನ್ನೆರೆಡನೆ ತರಗತಿಯ 400 ವಿದ್ಯಾರ್ಥಿಗಳು ತಮ್ಮ ಹಿಂದಿ ಪರೀಕ್ಷೆಯನ್ನು ಸೋಮವಾರ ಕಾರ್ ಹೆಡ್ ಲೈಟ್ ಬೆಳಕಲ್ಲಿ ಬರೆದ ಘಟನೆ ಬಿಹಾರದ ಮೋತಿಹಾರಿ ಪರೀಕ್ಷಾ ಕೇಂದ್ರದಿಂದ ವರದಿಯಾಗಿದೆ. ಮಹಾರಾಜ ಹರೇಂದ್ರ ಕಿಸೋರ್ ಕಾಲೇಜಿನ ಹೊರಗೆ ಕಾರಿನ ಹೆಡ್ ಲೈಟ್ ನಲ್ಲಿ ರಾತ್ರಿ 8 ಗಂಟೆಗಳ ವರೆಗೆ ಪರೀಕ್ಷೆ ನಡೆಯಿತು.
ಸೋಮವಾರದ ಎರಡನೇ ಪರೀಕ್ಷೆ ಅಪರಾಹ್ನ 1.45ರಿಂದ 5 ಗಂಟೆ ವರೆಗೆ ನಡೆಯಬೇಕಿತ್ತು. ಆದರೆ, ಸೀಟು ಹಂಚಿಕೆಯ ಗೊಂದಲ ಕೊನೆಯ ಕ್ಷಣದ ವರೆಗೆ ಪರಿಹಾರವಾಗದ ಹಿನ್ನೆಲೆಯಲ್ಲಿ ಅಪರಾಹ್ನ 4.30ರ ವರೆಗೆ ವಿದ್ಯಾರ್ಥಿಗಳಿಗೆ ಉತ್ತರಪತ್ರಿಕೆ ನೀಡಿರಲಿಲ್ಲ.
ಇದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪರಿಣಾಮ ಅವ್ಯವಸ್ಥೆ ಸೃಷ್ಟಿಯಾಗಿತ್ತು. ಕೂಡಲೇ ಪೊಲೀಸರಿಗೆ ಕರೆ ನೀಡಲಾಗಿತ್ತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು ಹಾಗೂ ದೊಡ್ಡ ಸಂಖ್ಯೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ಅನಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆರಂಭಿಸಿದಾಗ ಕತ್ತಲಾಗಿತ್ತು. ಆದರೆ, ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿತ್ತು. ಅಂತಿಮವಾಗಿ ಜನರೇಟರ್ ಬಾಡಿಗೆ ತರಲಾಗಿತ್ತು. ಕಾರುಗಳನ್ನು ಹೊಂದಿದ್ದ ಪೋಷಕರು ತಮ್ಮ ಕಾರಿನ ಹೆಡ್ಲೈಟ್ ಅನ್ನು ಆನ್ ಮಾಡಿ ಇರಿಸಿದರು. ಅದರ ಬೆಳಕಲ್ಲೇ ವಿದ್ಯಾರ್ಥಿಗಳು ಕಾಲೇಜಿನ ಕಾರಿಡರ್ನಲ್ಲಿ ಕುಳಿತು ಪರೀಕ್ಷೆ ಬರೆದರು. ಈ ಬಗ್ಗೆ ಜಿಲ್ಲೆಯ ಉನ್ನತ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.