ಮ್ಯೂನಿಚ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿರುವಂತೆಯೇ ಇತ್ತ ಉಕ್ರೇನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ನೇತೃತ್ವದ ನ್ಯಾಟೋ ಭದ್ರತಾ ಪಡೆಗಳು ಅಧಿಕೃತವಾಗಿ ರಣಾಂಗಣಕ್ಕಿಳಿಯಲು ಸಜ್ಜಾಗಿ ನಿಂತಿವೆಯಾದರೂ ಉಕ್ರೇನ್ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ್ಯಾಟೋ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಝೇಶನ್) ಪಡೆ ಕೂಡ ಚುರುಕುಗೊಂಡಿದ್ದು, ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನ್ಯಾಟೋ ಪಡೆ ಇದೀಗ ಸುಮಾರು 40 ಸಾವಿರ ಬಲಿಷ್ಠ ಪಡೆಯನ್ನು ಸಜ್ಜುಗೊಳಿಸಿದೆ. ಸದ್ಯ ಈ ಪಡೆ ಯಾವುದೇ ಸಮಯದಲ್ಲೂ ತುರ್ತು ಕಾರ್ಯಾಚರಣೆ ನಡೆಸಲು ಸಿದ್ಧವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟನ್‌ಬರ್ಗ್, ವಿಭಿನ್ನ ರೀತಿಯ ರಕ್ಷಣಾ ಕಾರ್ಯಾಚರಣೆಯ ಯೋಜನೆಗಳನ್ನು ಹಾಕಿಕೊಂಡ ನಮ್ಮ ತಂಡ ಸದ್ಯ ಕಾರ್ಯಪ್ರವೃತವಾಗಿವೆ. ಹಾಗಾಗಿ ಭೂ, ವಾಯು ಹಾಗೂ ತಟರಕ್ಷಣಾ ವಿಭಾಗದಲ್ಲಿ ಸೇನಾಪಡೆ ನಿಯೋಜಿಸಲು ಸಿದ್ಧವಾಗಿದ್ದೇವೆ. ಸದ್ಯದ ಮಟ್ಟಿಗೆ 1000 ಸೈನಿಕರು ಹಾಗೂ 100 ಯುದ್ದವಿಮಾನಗಳನ್ನು 30 ವಿವಿಧ ಆಯಕಟ್ಟಿನ ಪ್ರದೇಶದಲ್ಲಿ ಹೈಅಲರ್ಟ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಇದು ನಮ್ಮ ಸಹವರ್ತಿ ರಾಷ್ಟ್ರಗಳ ನೆರವಿಗೆ ಯಾವುದೇ ಸಮಯದಲ್ಲೂ ನೆರವಿಗೆ ಬರಲಿದೆ. ನಮ್ಮ ಸಹವರ್ತಿ ರಾಷ್ಟ್ರಗಳ ಬೆಂಬಲಕ್ಕೆ ನಾವು ಯಾವ ಸಮಯದಲ್ಲೂ ಬರಲಿದ್ದು, ಅವರ ಪ್ರತಿಯೊಂದು ಇಂಚಿನ ಪ್ರದೇಶವನ್ನು ನಾವು ಕಾಪಾಡಿಕೊಳ್ಳಲಿದ್ದೇವೆ. ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ರೀತಿಯ ತಪ್ಪು ಲೆಕ್ಕಾಚಾರ ಅಥವಾ ತಪ್ಪು ಗ್ರಹಿಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್ ಪ್ರವೇಶ ಮಾಡಲ್ಲ
ಇನ್ನು ಉಕ್ರೇನ್ ಮೇಲಿನ ರಷ್ಯಾ ದಾಳಿ ಬೆನ್ನಲ್ಲೇ ಭದ್ರತಾ ಪಡೆಗಳನ್ನು ಸಜ್ಜುಗೊಳಿಸಿರುವ ನ್ಯಾಟೋ ಉಕ್ರೇನ್ ಗೆ ತನ್ನ ಪಡೆಗಳನ್ನು ಕಳುಹಿಸುವುದಿಲ್ಲ ಎಂದೂ ಹೇಳುವ ಮೂಲಕ ಗೊಂದಲ ಮೂಡಿಸಿದೆ. ಉಕ್ರೇನ್ ನ್ಯಾಟೋ ಸದಸ್ಯರಾಷ್ಟ್ರವಲ್ಲದ ಕಾರಣ ನ್ಯಾಟೋ ಪಡೆಗಳು ಉಕ್ರೇನ್‌ಗೆ ನಾವು ಪ್ರವೇಶಿಸುವುದಿಲ್ಲ. ಆದರೆ ತುರ್ತು ಪರಿಸ್ಥಿತಿ ಉಂಟಾದರೆ ಯಾವುದೇ ಪರಿಸ್ಥಿತಿಗೂ ಸಿದ್ಧ ಎಂದು ಹೇಳಿದೆ.
'ಮಿತ್ರರಾಷ್ಟ್ರಗಳಿಗೆ ಬೆಂಬಲವನ್ನು ನೀಡುವುದನ್ನು ಮುಂದುವರಿಸಲು ಬಹಳ ಬದ್ಧರಾಗಿದ್ದಾರೆ. ಸಾಮೂಹಿಕ ರಕ್ಷಣೆಯ ಸಂದರ್ಭದಲ್ಲಿ ನಾವು ಈಗ ಮೊದಲ ಬಾರಿಗೆ ನ್ಯಾಟೋ ಪ್ರತಿಕ್ರಿಯೆ ಪಡೆಯನ್ನು ನಿಯೋಜಿಸುತ್ತಿದ್ದೇವೆ. NATO ರೆಸ್ಪಾನ್ಸ್ ಫೋರ್ಸ್ 40,000 ಸೈನಿಕರನ್ನು ಹೊಂದಬಹುದು, ಆದರೆ ಸ್ಟೋಲ್ಟೆನ್‌ಬರ್ಗ್ ಮೈತ್ರಿಯು ಸಂಪೂರ್ಣ ಬಲವನ್ನು ನಿಯೋಜಿಸುವುದಿಲ್ಲ. ನ್ಯಾಟೋ ಪರಿಭಾಷೆಯಲ್ಲಿ ವೆರಿ ಹೈ ರೆಡಿನೆಸ್ ಜಾಯಿಂಟ್ ಟಾಸ್ಕ್ ಫೋರ್ಸ್ ಎಂದು ಕರೆಯಲ್ಪಡುವ ಸ್ಪಿಯರ್‌ಹೆಡ್ ಘಟಕದ ಭಾಗಗಳನ್ನು ಸಹ ಕಳುಹಿಸಲಾಗುವುದು, ಇದು ಪ್ರಸ್ತುತ ಫ್ರಾನ್ಸ್‌ನ ನೇತೃತ್ವದಲ್ಲಿದೆ. ಈ ಪಡೆಗಳು ಉಕ್ರೇನ್ ಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಿದೆ ಎಂದು ಹೇಳಿದರು.