ನವದೆಹಲಿ :ವೀರ್ ದಾಮೋದರ್ ಸಾರ್ವರ್ಕರ್ ಅವರ ಜೀವನಚರಿತ್ರೆ ಬರೆದ ಲೇಖಕ ವಿಕ್ರಮ್ ಸಂಪತ್ ಅವರು ಸಲ್ಲಿಸಿದ ಅರ್ಜಿಗೆ ಸ್ಪಂದಿಸಿ ದಿಲ್ಲಿ ಹೈಕೋರ್ಟ್ ಗುರುವಾರ ಆದೇಶವೊಂದನ್ನು ಹೊರಡಿಸಿ ಅಮೆರಿಕನ್ ಇತಿಹಾಸತಜ್ಞೆ ಆಡ್ರೆ ಟ್ರಸ್ಚ್ಕೆ ಅವರ ಕೆಲವೊಂದು ಟ್ವೀಟ್‍ಗಳನ್ನು 48 ಗಂಟೆಗಳೊಳಗೆ ತೆಗೆದು ಹಾಕಬೇಕೆಂದು ಸೂಚಿಸಿದೆ.
ಸಂಪತ್ ಅವರ ವಿರುದ್ಧ ಕೃತಿಚೌರ್ಯ ಆರೋಪ ಹೊರಿಸಿದ ಪತ್ರವೊಂದನ್ನು ಪ್ರಕಟಿಸುವುದರಿಂದ ಆಡ್ರೇ ಮತ್ತಿತರ ಕೆಲ ಶೈಕ್ಷಣಿಕ ತಜ್ಞರಿಗೆ ಕೋರ್ಟ್ ನಿರ್ಬಂಧಿಸಿದ ನಂತರದ ಬೆಳವಣಿಗೆ ಇದಾಗಿದೆ.
ಸಾರ್ವರ್ಕರ್ ಕುರಿತಂತೆ ಸಂಪತ್ ಅವರು ಹೊರತಂದಿರುವ ಎರಡು ಸಂಚಿಕೆಯ ಜೀವನಚರಿತ್ರೆಯಲ್ಲಿ ಕೃತಿಚೌರ್ಯವಿದೆ ಎಂದು ಆಡ್ರೇ ಹೊರತಾಗಿ ಅನನ್ಯ ಚಕ್ರವರ್ತಿ ಮತ್ತು ರೋಹಿತ್ ಚೋಪ್ರಾ ಆರೋಪಿಸಿ ಬರೆದ ಪತ್ರವನ್ನು ಪ್ರಕಟಿಸದಂತೆ ನ್ಯಾಯಾಲಯ ಫೆಬ್ರವರಿ 18ರಂದು ತಡೆಯಾಜ್ಞೆ ವಿಧಿಸಿತ್ತು.
ಈ ತಡೆಯಾಜ್ಞೆಯ ನಂತರವೂ ಸಂಬಂಧಿತರು ಮಾಡಿದ್ದ ಟ್ವೀಟ್‍ಗಳನ್ನು ತೆಗೆದುಹಾಕಬೇಕೆಂದು ಕೋರಿ ಸಂಪತ್ ಸಲ್ಲಿಸಿದ್ದ ಅರ್ಜಿಗೆ ಇಂದು ಸ್ಪಂದಿಸಿದ ಕೋರ್ಟ್ ಇದೀಗ ಟ್ವಿಟ್ಟರ್ ಗೆ ಆ ಟ್ವೀಟ್‍ಗಳನ್ನು 48 ಗಂಟೆಗಳೊಳಗೆ ತೆಗೆದುಹಾಕುವಂತೆ ಸೂಚಿಸಿದೆ.
ಟ್ವೀಟ್‍ಗಳನ್ನು ತೆಗೆದುಹಾಕಬೇಕೆಂಬ ಆದೇಶವನ್ನು ವಿರೋಧಿಸಲು ವಾಕ್ ಸ್ವಾತಂತ್ರ್ಯವಿದೆ ಎಂದು ಪ್ರತಿವಾದಿಗಳ ಪರ ವಕೀಲರು ಹೇಳಿದರೆ, ತಾನು ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಟ್ವಿಟ್ಟರ್ ಹೇಳಿದೆ.
ಮೂವರು ಅಮೆರಿಕಾ ಮೂಲದ ಶಿಕ್ಷಣ ತಜ್ಞರು ಫೆಬ್ರವರಿ 11ರಂದು ಸಂಪತ್ ಅವರು ಫೆಲ್ಲೋ ಆಗಿರುವ ರಾಯಲ್ ಹಿಸ್ಟಾರಿಕಲ್ ಸೊಸೈಟಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದರು. ಸಂಪತ್ ಅವರ ಕೃತಿಯನ್ನು ಪರಾಮರ್ಶಿಸುವಂತೆಯೂ ಅವರು ಕೋರಿದ್ದರು.
ಇದನ್ನು ವಿರೋದಿಸಿ ಸಂಪತ್ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿ ರೂ 2 ಕೋಟಿ ಮಾನನಷ್ಟ ಕೋರಿದ್ದಾರೆ.