HEALTH TIPS

ಹಾಲಿ, ಮಾಜಿ ಜನಪ್ರತಿನಿಧಿಗಳ ವಿರುದ್ಧದ 4,984 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ: ಸುಪ್ರೀಂ ಗೆ ಮಾಹಿತಿ

                 ನವದೆಹಲಿ :ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ವಿರುದ್ಧದ ಒಟ್ಟು 4,984 ಕ್ರಿಮಿನಲ್ ಪ್ರಕರಣಗಳು ದೇಶದ ವಿವಿಧ ಸೆಷನ್ಸ್ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇಂತಹ 862 ಪ್ರಕರಣಗಳು ಏರಿಕೆಯಾಗಿವೆ.

             ನ್ಯಾಯಲಯದಿಂದ ಸರಣಿ ನಿರ್ದೇಶನಗಳು ಹಾಗೂ ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ 4,984ಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ‌

              ಇದರಲ್ಲಿ 1,899 ಪ್ರಕರಣಗಳು ಐದು ವರ್ಷಗಳಿಗಿಂತ ಹಳೆಯದು. 2018 ಡಿಸೆಂಬರ್ ವರೆಗೆ ಬಾಕಿ ಉಳಿದಿರುವ ಒಟ್ಟು ಪ್ರಕರಣಗಳ ಸಂಖ್ಯೆ 4,110 ಹಾಗೂ 2020 ಅಕ್ಟೋಬರ್ ವರೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 4,859 ಎಂಬುದನ್ನು ಗಮನಿಸಬಹುದು. 2018 ಡಿಸೆಂಬರ್ 4ರ ಬಳಿಕ 2,775 ಪ್ರಕರಣಗಳನ್ನು ವಿಲೇವಾರಿ ಮಾಡಿದ ಬಳಿಕವೂ ಸಂಸದರು ಹಾಗೂ ಶಾಸಕರ ವಿರುದ್ಧದ ಪ್ರಕರಣಗಳು 4,122ರಿಂದ 4,984ಕ್ಕೆ ಏರಿಕೆಯಾಗಿದೆ ಎಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗೆ ನೆರವು ನೀಡುತ್ತಿರುವ ಆಯಮಿಕಸ್ ಕ್ಯೂರಿ ಹಾಗೂ ಹಿರಿಯ ನ್ಯಾಯವಾದಿ ವಿಜಯ ಹನ್ಸಾರಿಯಾ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿ ತಿಳಿಸಿದೆ.

              ಜನ ಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಹಾಗೂ ದೋಷಿಗಳನ್ನು ಶಾಸಕಾಂಗ ಹಾಗೂ ಕಾರ್ಯಾಂಗದಿಂದ ಉಚ್ಛಾಟಿಸುವಂತೆ ಕೋರಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯ ಅವರು 2016ರಲ್ಲಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಯಮಿಕಸ್ ಕ್ಯೂರಿ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. 4,984 ಪ್ರಕರಣಗಳಲ್ಲಿ 3,322 ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪ್ರಕರಣಗಳು ಹಾಗೂ 1,165 ಸೆಷನ್ಸ್ ನ್ಯಾಯಾಲಯದ ಪ್ರಕರಣಗಳು ಎಂದು ವರದಿ ಹೇಳಿದೆ.

            ಇಂತಹ ಬಾಕಿ ಉಳಿದಿರುವ 1,899 ಪ್ರಕರಣಗಳು 5 ವರ್ಷಗಳಿಂದ ಹೆಚ್ಚು ಹಳೆಯದು. ಇಂತಹ 1,475 ಪ್ರಕರಣಗಳು ಎರಡು ಹಾಗೂ ಐದು ವರ್ಷಗಳ ನಡುವಿನ ಅವಧಿಯಲ್ಲಿ ಬಾಕಿ ಇದೆ. ಕ್ರಿಮಿನಲ್ ಹಿನ್ನೆಲೆ ಉಳ್ಳ ಹೆಚ್ಚೆಚ್ಚು ವ್ಯಕ್ತಿಗಳು ಸಂಸತ್ತು ಹಾಗೂ ವಿಧಾನ ಸಭೆಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ತುರ್ತು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಇದೆ ಎಂದು ವರದಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries