ನವದೆಹಲಿ: ಕೇಂದ್ರ ಸರ್ಕಾರ 5 ಕೋಟಿ ಕೋರ್ಬೆವ್ಯಾಕ್ಸ್ ಕೋವಿಡ್ ಲಸಿಕೆ ಖರೀದಿಗೆ ಆದೇಶ ಹೊರಡಿಸಿದೆ.
ಪ್ರತಿ ಲಸಿಕೆಗೆ ತೆರಿಗೆ ಹೊರತುಪಡಿಸಿ ಪ್ರತಿ ಲಸಿಕೆಗೆ 145 ರೂಪಾಯಿ ವೆಚ್ಚವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೊಸ ಲಸಿಕೆಯನ್ನು ಯಾವ ವರ್ಗದ ಫಲಾನುಭವಿಗಳಿಗೆ ನೀಡಬೇಕೆಂಬುದನ್ನು ಸರ್ಕಾರ ಇನ್ನಷ್ಟೇ ನಿರ್ಧರಿಸಬೇಕಿದೆ.
ಮೂಲಗಳ ಪ್ರಕಾರ ತಾಂತ್ರಿಕ ಗುಂಪು ಹಾಗೂ ಆರೋಗ್ಯ ಸಚಿವಾಲಯದ ಲಸಿಕೆ ವಿಭಾಗದಲ್ಲಿ ಮುನ್ನೆಚ್ಚರಿಕೆಯ ಡೋಸ್‌ಗಳ ವ್ಯಾಪ್ತಿಯನ್ನು ವಿಸ್ತರಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಕೃತ ಮುನ್ನೆಚ್ಚರಿಕೆಯ ಡೋಸ್ ಗಳನ್ನು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಬಹುವಿಧದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ
ಸಾರ್ವಜನಿಕ ವಲಯದ ಉದ್ಯಮದ ಹೆಚ್ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ ಕಾರ್ಬೆವ್ಯಾಕ್ಸ್ ಲಸಿಕೆಯ ಪೂರೈಕೆ ಆದೇಶವನ್ನು ಬಯೋಲಾಜಿಕಲ್ ಇ ಗೆ ಆರೋಗ್ಯ ಸಚಿವಾಲಯದ ಪರವಾಗಿ ನೀಡಿದೆ. ಆದೇಶದ ಪ್ರಕಾರ ಹೈದರಾಬಾದ್ ಸಂಸ್ಥೆ ಫೆಬ್ರವರಿಯಲ್ಲಿ ಲಸಿಕೆಗಳನ್ನು ಪೂರೈಕೆ ಮಾಡಬೇಕಿದೆ.
ಈ ನಿಟ್ಟಿನಲ್ಲಿ ಸಂಸ್ಥೆಗೆ 1,500 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಎನ್ ಟಿಎಜಿಐ ಶಿಫಾರಸು ಆಧಾರದಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಗಳನ್ನು ನೀಡಲಾಗುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ವಿಸ್ತರಿಸಲಾಗುತ್ತದೆ ಎಂದು ಸರ್ಕಾರ ಸಂಸತ್ ಗೆ ಮಾಹಿತಿ ನೀಡಿದೆ.