ನೊಯ್ಡ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ಫೆ.20ರಂದು ನಡೆಯಲಿದ್ದು, ಸಮಾಜವಾದಿ ಪಕ್ಷವು (52) ಗರಿಷ್ಠ ಕೋಟ್ಯಧಿಪತಿಗಳನ್ನು ಕಣಕ್ಕಿಳಿಸಿದ್ದರೆ,ನಂತರದ ಸ್ಥಾನದಲ್ಲಿ ಬಿಜೆಪಿ (48) ಇದೆ.
ಬಿಎಸ್‌ಪಿಯ 46,ಕಾಂಗ್ರೆಸ್‌ನ 29 ಮತ್ತು ಆಪ್‌ನ 18 ಕೋಟ್ಯಧಿಪತಿ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ ಎಂದು ಯುಪಿ ಇಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ಹೇಳಿದೆ.
ಮೂರನೇ ಹಂತದ ಮತದಾನಕ್ಕಾಗಿ ಕಣದಲ್ಲಿರುವ 627 ಅಭ್ಯರ್ಥಿಗಳ ಪೈಕಿ 623 ಜನರು ಸಲ್ಲಿಸಿರುವ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ವರದಿಯನ್ನು ಸಿದ್ಧಗೊಳಿಸಲಾಗಿದೆ. ಇತರ ನಾಲ್ವರು ಅಭ್ಯರ್ಥಿಗಳ ಅಫಿಡವಿಟ್‌ಗಳು ಕೆಟ್ಟದಾಗಿ ಸ್ಕ್ಯಾನ್ ಆಗಿದ್ದವು ಅಥವಾ ಅಪೂರ್ಣವಾಗಿದ್ದವು ಎಂದು ವರದಿಯು ತಿಳಿಸಿದೆ.
ಒಟ್ಟು 245 (ಶೇ.39) ಅಭ್ಯರ್ಥಿಗಳು ಒಂದು ಕೋಟಿ ರೂ.ಗೂ ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಶ್ರೀಮಂತ ಅಭ್ಯರ್ಥಿಗಳಿಗೆ ಟಿಕೆಟ್‌ಗಳನ್ನು ನೀಡಿದ್ದು,ಇದು ಚುನಾವಣೆಗಳಲ್ಲಿ ಹಣಬಲದ ಪಾತ್ರವನ್ನು ಸ್ಪಷ್ಟಪಡಿಸಿದೆ ಎಂದು ವರದಿಯು ಹೇಳಿದೆ.
ಝಾನ್ಸಿಯ ಬಬಿನಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್‌ಪಿಯ ಯಶಪಾಲ ಸಿಂಗ್ ಯಾದವ ಕಣದಲ್ಲಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು,ಅವರು 70 ಕೋ.ರೂ.ಗೂ ಅಧಿಕ ಮಾಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಕಾನ್ಪುರದ ಕಿಡ್ವಾಯಿ ನಗರದಿಂದ ಸ್ಪರ್ಧಿಸಿರುವ ಅಜಯ ಕಪೂರ್(69 ಕೋ.ರೂ.) ಮತ್ತು ಆರ್ಯ ನಗರದಿಂದ ಸ್ಪರ್ಧಿಸಿರುವ ಪ್ರಮೋದ ಕುಮಾರ(45 ಕೋ.ರೂ.) ಅವರು ನಂತರದ ಸ್ಥಾನಗಳಲ್ಲಿದ್ದು,ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿರುವ ರಾಜಾ ಬಾಬು ಮತ್ತು ರಾಹುಲ್ ಪ್ರತಾಪ ಸಿಂಗ್ ಅವರು ಶೂನ್ಯ ಆಸ್ತಿಗಳನ್ನು ಘೋಷಿಸಿದ್ದಾರೆ. ಅವರಿಬ್ಬರೂ ಇಟಾ ಜಿಲ್ಲೆಯ ಜಲೇಸರ್( ಎಸ್‌ಸಿ ಮೀಸಲು) ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.
ಶೂನ್ಯ ಆಸ್ತಿಯನ್ನು ಹೊರತುಪಡಿಸಿದರೆ ಮಹೋಬಾ ಜಿಲ್ಲೆಯ ಮಹೋಬಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದೇವರಾಜ್ ಅವರು ಅತ್ಯಂತ ಕಡಿಮೆ,ಕೇವಲ 10,000 ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಕಾನ್ಪುರ ನಗರದ ಬಿಲಾಹುರ್ (ಎಸ್‌ಸಿ) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಮದಾಸ್ (20,000 ರೂ.) ಮತ್ತು ಔರಾಯಿಯಾ ಜಿಲ್ಲೆಯ ದಿಬಿಯಾಪುರ ಕ್ಷೇತ್ರದ ಆಝಾದ್ ಸಮಾಜ ಪಾರ್ಟಿ (ಕಾನ್ಶಿರಾಂ)ಯ ಅಭ್ಯರ್ಥಿ ಧಿರೇಂದ್ರ ಸಿಂಗ್ ಗೌತಮ (25,000 ರೂ.) ಅವರು ದೇವರಾಜ್‌ಗಿಂತ ಮೇಲಿನ ಸ್ಥಾನಗಳಲ್ಲಿದ್ದಾರೆ.
ಫೆ.20ರಂದು 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ.