ನವದೆಹಲಿ: ಚೀನಾ ಆ್ಯಪ್ ಗಳನ್ನು ನಿಷೇಧಿಸುವ ಪ್ರವೃತ್ತಿ ದೇಶದಲ್ಲಿ ಮತ್ತೆ ಮುಂದುವರೆದಿದ್ದು, ಈ ಬಾರಿ 54 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲು ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ 2 ಬಾರಿ ಚೀನಾ ಆ್ಯಪ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿಗೆ 54 ಚೀನಾ ಮೂಲದ ಆ್ಯಪ್ ಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ.
ಭಾರತದ ಭದ್ರತೆಗೆ ಅಪಾಯವನ್ನುಂಟುಮಾಡುವ ಇನ್ನೂ 54 ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಲಿದೆ. ಮೂಲಗಳ ಪ್ರಕಾರ ಈ 54 ಚೈನೀಸ್ ಅಪ್ಲಿಕೇಶನ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ ಸೇರಿವೆ ಎನ್ನಲಾಗಿದೆ.
ಉಳಿದಂತೆ ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್‌ಕಾರ್ಡ್ ಫಾರ್ ಸೇಲ್ಸ್‌ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೈವರ್, ಒನ್ಮಿಯೊಜಿ ಅರೆನಾ, ಆಪ್‌ಮಿಯೊ ಚೆಸ್, ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ ಒಟ್ಟು 54 ಆ್ಯಪ್ ಗಳನ್ನು ನಿಷೇಧದ ಪಟ್ಟಿಗೆ ಸೇರಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ, ರಾಷ್ಟ್ರದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ TikTok, WeChat ಮತ್ತು Helo ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿತ್ತು.
ಜೂನ್ 29 ರ ಆದೇಶದಲ್ಲಿ ನಿಷೇಧಿಸಲಾದ ಹೆಚ್ಚಿನ ಅಪ್ಲಿಕೇಶನ್‌ಗಳು ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ಪ್ರಾಯಶಃ ಆ ಮಾಹಿತಿಗಳನ್ನು ಅವು "ಹೊರಗೆ" ಕಳುಹಿಸುತ್ತಿವೆ ಎಂಬ ಗುಪ್ತಚರ ಏಜೆನ್ಸಿಗಳ ಕಳವಳ ಶಂಕೆ ಮೇರೆಗೆ ಅವುಗಳನ್ನು ನಿಷೇಧಿಸಲಾಗಿತ್ತು. ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ 20 ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯ ಚೀನಾ ಸೈನಿಕರು ಸಾವನ್ನಪ್ಪಿದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.
ನಂತರ ಸೆಪ್ಟೆಂಬರ್‌ನಲ್ಲಿ, ಭಾರತ ಸರ್ಕಾರವು "ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ" ಎಂದು ಹೇಳುವ ಮೂಲಕ 118 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿತ್ತು. ಆದಾಗ್ಯೂ, ಚೀನಾದ ಮೊಬೈಲ್ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವನ್ನು ಮುಂದುವರಿಸುವ ಭಾರತದ ನಿರ್ಧಾರವನ್ನು ಚೀನಾ ವಿರೋಧಿಸಿತ್ತು. ಈ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ ತಾರತಮ್ಯರಹಿತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು.