ಲಖನೌ: ರಾಷ್ಟ್ರದಾದ್ಯಂತ ತೀವ್ರ ಕುತೂಹಲ ಕೆರಳಸಿರುವ ಉತ್ತರ ಪ್ರದೇಶ ವಿಧಾನಸಭೆಗೆ ಇಂದು ಎರಡನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಕಚೇರಿ ತಿಳಿಸಿದೆ.
ಸಹರಾನ್‌ಪುರ್, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಮ್‌ಪುರ್, ಅಮ್ರೋಹಾ, ಬುದೌನ್, ಬರೇಲಿ ಮತ್ತು ಶಹಜಹಾನ್‌ಪುರ ಮತ್ತಿತರ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಂತದಲ್ಲಿ 55 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮುಸ್ಲಿಂ ಪ್ರಾಬಲ್ಯದ ಸಮಾಜವಾದಿ ಪಕ್ಷ ಬಲವಾಗಿರುವ ಪ್ರದೇಶಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ. ಮುಕ್ತ, ನ್ಯಾಯಸಮ್ಮತ ಚುನಾವಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಬ್ರಹ್ಮದೇವ್ ರಾಮ್ ತ್ರಿಪಾಠಿ ತಿಳಿಸಿದ್ದಾರೆ.
ಏಳು ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿದ್ದು, ಫೆಬ್ರವರಿ 10 ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಮಾರ್ಚ್ 10 ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಹೊರಬೀಳಲಿದೆ.