ನವದೆಹಲಿ: ಭಾರತೀಯ ಜೀವ ವಿಮಾ ನಿಗಮದಲ್ಲಿನ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು (ಐಪಿಒ) ಕೇಂದ್ರ ಸರ್ಕಾರ ಭಾನುವಾರ ಕರಡು ಪ್ರತಿಗಳನ್ನು ಸೆಬಿಗೆ ಸಲ್ಲಿಸಿದೆ.
ಭಾನುವಾರ ಸಲ್ಲಿಸಲಾಗಿರುವ ಕರಡು ಪ್ರತಿ ಪ್ರಕಾರ, ಕೇಂದ್ರ ಸರ್ಕಾರ ಎಲ್ ಐಸಿಯಲ್ಲಿನ ಶೇಕಡಾ 5 ರಷ್ಟು ಷೇರುಗಳನ್ನು ಅದರೆ 31.63 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ.ವ್ಯಾಪಾರಿ ಬ್ಯಾಂಕಿಂಗ್ ಮೂಲಗಳ ಪ್ರಕಾರ, ಸರ್ಕಾರವು ಐಪಿಒದಿಂದ 63,000 ಕೋಟಿ (ಸುಮಾರು 8 ಬಿಲಿಯನ್ ಡಾಲರ್ ) ವರೆಗೆ ಬಂಡವಾಳ ಸಂಗ್ರಹಿಸುವ ನಿರೀಕ್ಷೆಯಿದೆ.
ಐಪಿಒನ ಒಂದು ಭಾಗವನ್ನು ಅರ್ಹ ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಚಂದಾದಾರಿಕೆಗಾಗಿ ಕಾಯ್ದಿರಿಸಲಾಗುತ್ತದೆ. ನೌಕರರ ಮೀಸಲು ಭಾಗ ಶೇಕಡಾ 5ಕ್ಕಿಂತ ಹಾಗೂ ಪಾಲಿಸಿದಾರರಿಗೆ ಆಫರ್ ಗಾತ್ರ ಶೇ. 10ಕ್ಕಿಂತ ಹೆಚ್ಚಿರುವುದಿಲ್ಲ ಎಂದು ಡಿಆರ್ ಹೆಚ್ ಪಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಎಲ್ ಐಸಿ ಷೇರು ಬಂಡವಾಳ ರೂ. 100 ಕೋಟಿಯಿಂದ ರೂ. 6,325 ಕೋಟಿಗೆ ಹೆಚ್ಚಿದ್ದರಿಂದ ಐಪಿಒಗೆ ಸಹಾಯವಾಗಿತ್ತು. ಸರ್ಕಾರ ಎಲ್ ಐಸಿಯಲ್ಲಿ ಶೇ. 100 ರಷ್ಟು ಪಾಲು ( ಅಥವಾ 6,324,997,701 ಷೇರು) ಹೊಂದಿದೆ. ಇದೇ ರೀತಿಯಲ್ಲಿ ಇದ್ದರೆ ದೇಶದ ಅತಿದೊಡ್ಡ ಬಂಡವಾಳ ಹೊಂದಿರುವ ಕಂಪನಿಯಾಗುವ ಸಾಧ್ಯತೆಯಿದೆ.
ಎಲ್ ಐಸಿ ಇಂದು ಐಪಿಒನ್ನು ಸೆಬಿಗೆ ಸಲ್ಲಿಸಿದೆ. ಇದರ ಮೌಲ್ಯಕ್ಕಾಗಿ 31.62 ಕೋಟಿ ಷೇರುಗಳನ್ನು ಮಾರಾಟದ ಪ್ರಸ್ತಾಪವಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಟ್ವೀಟ್ ಮಾಡಿದ್ದಾರೆ.