HEALTH TIPS

ದೇಶದಲ್ಲಿ ಕೋವಿಡ್ ಸಾವಿನ ಪ್ರಮಾಣ 6 ಪಟ್ಟು ಅಧಿಕ

          ನವದೆಹಲಿ: ಭಾರತದಲ್ಲಿ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 32 ಲಕ್ಷದಿಂದ 37 ಲಕ್ಷದಷ್ಟು ಇರಬಹುದು ಎಂದು ಹೊಸ ಸಂಶೋಧನೆ ಹೇಳಿದೆ. ಈ ಸಂಖ್ಯೆಯು ಸರ್ಕಾರದ ಅಧಿಕೃತ ದತ್ತಾಂಶಗಳಿಗಿಂತ ಸುಮಾರು 6-8 ಪಟ್ಟು ಹೆಚ್ಚು.

           ಕೋವಿಡ್ ಎರಡನೇ ಅಲೆಯ ಬಳಿಕ ಅಂದರೆ, 2021ರ ನವೆಂಬರ್‌ ವೇಳೆಗೆ ದೇಶದಲ್ಲಿ ಅಂದಾಜು 37 ಲಕ್ಷದವರೆಗೆ ಸಾವುಗಳು ಸಂಭವಿಸಿವೆ ಎಂದು ದೆಹಲಿಯ ಸಿಎಸ್‌ಎಚ್‌ನ ಸಂಶೋಧಕ ಕ್ರಿಸ್ಟೋಫರ್ ಗುಲ್ಮೊಟೊ ಅವರು ಹೇಳಿದ್ದಾರೆ.

               ಇದಕ್ಕೆ ಪುರಾವೆಯಾಗಿ ತಮ್ಮ ಅಧ್ಯಯನ ಮಾದರಿಯನ್ನು ಅವರು ಒದಗಿಸಿದ್ದಾರೆ.

2021ರ ನವೆಂಬರ್‌ನಲ್ಲಿ ಅಧಿಕೃತವಾಗಿ 4.59 ಲಕ್ಷ ಸಾವುಗಳು ದಾಖಲಾಗಿದ್ದವು. ಈಗ ಈ ಪ್ರಮಾಣ 5 ಲಕ್ಷದ ಗಡಿ ದಾಟಿದೆ. ಒಂದು ವೇಳೆ 32ರಿಂದ 37 ಲಕ್ಷ ಸಾವುಗಳನ್ನು ಗಣನೆಗೆ ತೆಗೆದುಕೊಂಡರೆ, ಭಾರತವು ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಸಾವುಗಳಿಗೆ ಸಾಕ್ಷಿಯಾಗಲಿದೆ.

            ಕೋವಿಡ್‌ ಮರಣ ದರದ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ. 2021ರ ನವೆಂಬರ್‌ನಲ್ಲಿ ಜಾಗತಿಕ ಸರಾಸರಿ ಕೋವಿಡ್ ಮರಣ ದರ 0.6 (ಪ್ರತೀ 1000 ಜನರಿಗೆ) ಇತ್ತು. ಭಾರತದಲ್ಲಿ ಪ್ರತೀ 1000 ಜನರಿಗೆ 2.3ರಿಂದ 2.6ರಷ್ಟು ಜನ ಮೃತಪಟ್ಟಿದ್ದಾರೆ. ಇದು ಜಾಗತಿಕ ಸರಾಸರಿಗೆ ಹೋಲಿಸಿದರೆ 4 ಪಟ್ಟು ಹೆಚ್ಚು. ದೇಶದ ಮರಣ ದರವನ್ನು ಪರಿಷ್ಕರಿಸಿದರೆ, ಈಗಿರುವ 127ನೇ ಸ್ಥಾನದಿಂದ 13ರಿಂದ 19ನೇ ಸ್ಥಾನಕ್ಕೆ ಭಾರತ ಕುಸಿಯಲಿದೆ.

           4 ಜನಸಂಖ್ಯಾ ಮಾದರಿಗಳನ್ನು ಆಯ್ಕೆಮಾಡಿ ವಿಶ್ಲೇಷಿಸಲಾಗಿದೆ. ಒಂದನೆಯದು, ಕೇರಳದ ಸಾಮಾನ್ಯ ಜನಸಂಖ್ಯೆ (26,628 ಕೋವಿಡ್ ಸಾವು), ಎರಡನೆಯದು, ಶಾಸಕರು ಮತ್ತು ಸಂಸದರು (43 ಸಾವುಗಳು), ಮೂರನೆಯದು, ರೈಲ್ವೆ ನೌಕರರು ( 1,952 ಕೋವಿಡ್ ಸಾವು) ನಾಲ್ಕನೆಯದು, ಕರ್ನಾಟಕದ ಶಿಕ್ಷಕರು (268 ಸಾವು).

             ಸಾವಿನ ಅಂದಾಜಿನ ವಿಶ್ವಾಸಾರ್ಹತೆ, ಪ್ರಾದೇಶಿಕ ಪ್ರಾತಿನಿಧ್ಯ, ಜನಸಂಖ್ಯಾ ಗುಣಲಕ್ಷಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಾಲ್ಕು ಜನಸಂಖ್ಯಾ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೇರಳ, ಕರ್ನಾಟಕ ಹಾಗೂ ತಮಿಳುನಾಡನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಸಾವಿನ ದತ್ತಾಂಶ ಲೆಕ್ಕಾಚಾರ ನಿಖರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಝಾ ವರದಿಯೂ ಇದನ್ನೇ ಹೇಳಿತ್ತು

           2020ರ ಜೂನ್ 1ರಿಂದ 2021ರ ಜುಲೈ1ರವರೆಗೆ ದೇಶದಲ್ಲಿ 32 ಲಕ್ಷ ಕೋವಿಡ್ ಸಾವು ಸಂಭವಿಸಿವೆ ಎಂದು ಟೊರಾಂಟೊ ವಿಶ್ವವಿದ್ಯಾಲಯದ ಪ್ರಭಾತ್ ಝಾ ಮತ್ತು ಅವರ ತಂಡದ ವರದಿ ಅಂದಾಜಿಸಿತ್ತು. ಇದು ಅಧಿಕೃತ ದತ್ತಾಂಶಕ್ಕಿಂತ 6-7 ಪಟ್ಟು ಅಧಿಕ. ಸಾವುಗಳು ದಾಖಲಾಗದಿರುವುದು ಅಥವಾ ಸಾವುಗಳನ್ನು ಇತರೆ ಕಾಯಿಲೆಗಳ ಜೊತೆ ತಳುಕು ಹಾಕುವುದು ಮೊದಲಾದ ಕಾರಣಗಳಿಂದ ಕೋವಿಡ್ ಸಾವುಗಳು ಅಂದಾಜಿಸಿದ್ದಕ್ಕಿಂತ ಎಷ್ಟೋ ಪ್ರಮಾಣದಷ್ಟು ಕಡಿಮೆ ದಾಖಲಾಗಿವೆ ಎಂದು ಝಾ ಹೇಳಿದ್ದರು.

            ಈ ಹಿಂದೆ ವರದಿಯಾಗಿದ್ದ ಇಂತಹದ್ದೇ ಅಧ್ಯಯನ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿರಸ್ಕರಿಸಿತ್ತು. ಊಹೆಯ ಆಧಾರದಲ್ಲಿ ಮಾಡಲಾಗಿರುವ ಅಧ್ಯಯನಗಳಲ್ಲಿ ಸಾಕಷ್ಟು ಲೋಪಗಳಿವೆ ಎಂದು ತಿಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries