ಅಗರ್ತಲಾ: ಚಂದ್ರನ ಮೇಲೆ ಮನುಷ್ಯ ಕಾಲಿಟ್ಟಿರುವುದು ಈಗ ಇತಿಹಾಸ. ಆದರೆ ಇದೀಗ ಅಲ್ಲಿಯೇ ಜಮೀನು ಖರೀದಿ ಮಾಡುವವರ ಸಂಖ್ಯೆ ಏರುತ್ತಿರುವುದು ಇತ್ತೀಚಿನ ಘಟನೆ. ಕೆಲ ತಿಂಗಳ ಹಿಂದೆ ತ್ರಿಪುರಾದ ದಕ್ಷಿಣ ಜಿಲ್ಲೆಯ ಸುಮನ್ ದೇಬನಾಥ್ ಅವರು ಜಮೀನು ಖರೀದಿಗೆ 6 ಸಾವಿರ ರೂಪಾಯಿ ಪಾವತಿಸಿ, ಜಾಗ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದರು.
ಇದೀಗ ಅದರ ಬೆನ್ನಲ್ಲೇ ತ್ರಿಪುರಾದವರೇ ಆದ ವ್ಯಕ್ತಿಯೊಬ್ಬ ತಾನು ಚಂದ್ರನಲ್ಲಿ ಒಂದು ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಮೋಹನ್‌ಪುರ ಉಪವಿಭಾಗದ ಗ್ರಾಮದ ನಿವಾಸಿ ಚಂಪಕ್ ದೇಬನಾಥ್ ಅವರು ಒಂದು ಎಕರೆ ಜಮೀನು ಖರೀದಿ ಮಾಡಿದ್ದಾರಂತೆ. ಮೋಟಾರ್ ಮೆಕ್ಯಾನಿಕ್ ಆಗಿರುವ ಚಂಪಕ್ ಅವರು ತಾವು ಈ ಜಮೀನಿಗಾಗಿ ಇದಾಗಲೇ ಮುಂಗಡ ಹಣ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಇಂಟರ್‌ನ್ಯಾಷನಲ್ ಲೂನಾರ್ ಸೊಸೈಟಿಗೆ ಆರು ಸಾವಿರ ರೂಪಾಯಿ ಮುಂಗಣ ಹಣ ನೀಡಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದಾಗಲೇ ಇಂಟರ್‌ನ್ಯಾಷನಲ್ ಲೂನಾರ್ ಸೊಸೈಟಿಗೆ 139 ಡಾಲರ್ ನೀಡಿ ಚಂದ್ರನಲ್ಲಿ ಮೂರು ಎಕರೆ ಜಮೀನು ಖರೀದಿ ಮಾಡಿದ್ದೇನೆ. ಚಂದ್ರನಲ್ಲಿ ಜಮೀನು ಖರೀದಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿ ಆಧಾರದ ಮೇಲೆ ತಿಳಿದುಕೊಂಡಿದ್ದೆ. ನಮ್ಮ ರಾಜ್ಯದ ವ್ಯಕ್ತಿಯೊಬ್ಬರು ಚಂದ್ರನಲ್ಲಿರುವ ಜಾಗವನ್ನು ಖರೀದಿಸಿದ ನಂತರ ನಾನೂ ಖರೀದಿಸಬೇಕೆಂದು ನಿರ್ಧರಿಸಿದ್ದೆ. ನನ್ನ ತಮ್ಮ ಜಯಂತ ದೇಬನಾಥ್ ಸೊಸೈಟಿ ಮೂಲಕ ಮೂರು ಎಕರೆ ಜಾಗವನ್ನು ನನ್ನ ಹೆಸರಿನಲ್ಲಿ ಖರೀದಿಸಿದ್ದಾನೆ ಎಂದಿದ್ದಾರೆ.
ಇದಾಗಲೇ ಇವರು ಜಮೀನಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸೊಸೈಟಿಯಿಂದ ಪಡೆದುಕೊಂಡಿದ್ದಾರಂತೆ. ಇ-ಮೇಲ್ ಮೂಲಕ ಅಗತ್ಯ ದಾಖಲೆಗಳನ್ನು ಸೊಸೈಟಿಯಿಂದ ಪಡೆದುಕೊಂಡಿದ್ದೇನೆ. ಮೂಲ ಪ್ರತಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತದೆ ಮತ್ತು ಮುಂದಿನ ವಾರ ದಾಖಲೆಗಳು ನನಗೆ ತಲುಪುವ ಸಾಧ್ಯತೆಯಿದೆ ಎಂದಿದ್ದಾರೆ.