ನವದೆಹಲಿ: ಭಾರತದ ಶೇ. 70 ಪ್ರತಿಶತದಷ್ಟು 15-18 ವಯಸ್ಸಿನ ಹದಿಹರೆಯದವರಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, 'ಭಾರತದ ಶೇ. 70 ಪ್ರತಿಶತದಷ್ಟು 15-18 ವಯಸ್ಸಿನ ಹದಿಹರೆಯದ ಜನರು ಇಲ್ಲಿಯವರೆಗೆ COVID-19 ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ ಎಂದು ಹೇಳಿದರು.
ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವ ಈ ವಯೋಮಾನದವರು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
"ಯುವ ಭಾರತವು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಮತ್ತಷ್ಟು ಬಲಪಡಿಸುತ್ತಿದೆ. ನಮ್ಮ 15-18 ವಯಸ್ಸಿನ ಯುವಕರಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ತಮ್ಮ ಮೊದಲ ಡೋಸ್ COVID19 ಲಸಿಕೆಯನ್ನು ಪಡೆದಿದ್ದಾರೆ. ಎಲ್ಲಾ ಅರ್ಹ ಯುವ ಸ್ನೇಹಿತರಿಗೆ ನಾನು ಬೇಗನೆ ಲಸಿಕೆ ಹಾಕುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 15 ರಿಂದ 18 ವಯೋಮಾನದ 1.47 ಕೋಟಿ ಫಲಾನುಭವಿಗಳು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ.
24 ಗಂಟೆಗಳ ಅವಧಿಯಲ್ಲಿ 49.16 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದ್ದು, ದೇಶದಲ್ಲಿ ನಿರ್ವಹಿಸಲಾದ ಸಂಚಿತ COVID-19 ಲಸಿಕೆ ಡೋಸ್‌ಗಳ ಪ್ರಮಾಣ 172.81 ಕೋಟಿಯನ್ನು ಮೀರಿದೆ.
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಪ್ರಕಾರ, 2021-22ಕ್ಕೆ 15-18 ವಯಸ್ಸಿನ ಫಲಾನುಭವಿಗಳ ಅಂದಾಜು ಜನಸಂಖ್ಯೆ 7.4 ಕೋಟಿಯಷ್ಟಿದ್ದು, ಜನವರಿ 3 ರಿಂದ ದೇಶಾದ್ಯಂತ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿತು.