ನವದೆಹಲಿ: ಮುಂಬರುವ ಮಾರ್ಚ್ 31ಕ್ಕೆ ಮುಕ್ತಾಯವಾಗಲಿರುವ ಆರ್ಥಿಕ ವರ್ಷದಲ್ಲಿ ಭಾರತದ ತೈಲ ಆಮದು ಮೊತ್ತ 7.5 ಲಕ್ಷ ಕೋಟಿ ರೂ. ದಾಟುವ ಅಂದಾಜು ಇದೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಾಗಿದೆ. ಯೂಕ್ರೇನ್-ರಷ್ಯಾ ಯುದ್ಧ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ 7 ವರ್ಷದ ಗರಿಷ್ಠಕ್ಕೆ ತಲುಪಿರುವುದು ಇದಕ್ಕೆ ಪ್ರಮುಖ ಕಾರಣ.
ಕಳೆದ 10 ತಿಂಗಳಲ್ಲಿ ಭಾರತ ಕಚ್ಚಾತೈಲ ಆಮದಿಗೆ 7.1 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಕಳೆದ ಜನವರಿ ನಂತರ ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಜನವರಿ ತಿಂಗಳಲ್ಲಿ ಭಾರತ 90 ಸಾವಿರ ಕೋಟಿ ರೂ.ಗಳನ್ನು ತೈಲ ಆಮದಿಗಾಗಿ ವೆಚ್ಚ ಮಾಡಿದೆ. ಸಾಮಾನ್ಯವಾಗಿ ಭಾರತ ಸರಾಸರಿ ಪ್ರತಿ ತಿಂಗಳು 50 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿತ್ತು. ಫೆಬ್ರವರಿಯಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲ ಬೆಲೆ 100 ಡಾಲರ್ ದಾಟಿದೆ. ಹೀಗಾಗಿ ಮಾರ್ಚ್ ಅಂತ್ಯದ ವೇಳೆಗೆ ವರ್ಷದ ಒಟ್ಟಾರೆ ತೈಲ ವೆಚ್ಚ 8.6 ಲಕ್ಷ ಕೋಟಿ ರೂ. ದಾಟಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಕಳೆದ ವರ್ಷ ಏಪ್ರಿಲ್ನಿಂದ ಈ ವರ್ಷ ಜನವರಿವರೆಗೆ 3.3 ಕೋಟಿ ಟನ್ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಭಾರತ ಶೇಕಡ 85 ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕರೊನಾ ಕಾಲದಲ್ಲಿ ತುಸು ಇಳಿಕೆಯಾಗಿದ್ದ ಆಮದು ಪ್ರಮಾಣ ಈಗ ಮತ್ತೆ ಏರಿಕೆ ಕಾಣುತ್ತಿದೆ. ಫೆ.24ರಂದು ಬ್ರೆಂಟ್ ಕಚ್ಚಾತೈಲ ದರ ಬ್ಯಾರಲ್ಗೆ 105.58 ಡಾಲರ್ ತಲುಪಿತ್ತು. ಈಗಲೂ 100 ಡಾಲರ್ ಸಮೀಪದಲ್ಲೇ ವಹಿವಾಟು ನಡೆಯುತ್ತಿದೆ.
ಖಾದ್ಯತೈಲ ಬೆಲೆ ಹೆಚ್ಚಳ ಸಂಭವ: ಯೂಕ್ರೇನ್-ರಷ್ಯಾ ಯುದ್ಧದ ಕಾರಣ ಖಾದ್ಯತೈಲ ಸಾಗಣೆ ನೌಕೆಯ ಮೇಲೆ ಪರಿಣಾಮ ಬೀರಿದೆ. 3.50 ಲಕ್ಷ ಟನ್ ಖಾದ್ಯ ತೈಲವನ್ನು ಬಂದರಿನಲ್ಲಿ ಸಂಗ್ರಹ ಮತ್ತು ನೌಕೆ ಲೋಡಿಂಗ್ಗೆ ಅಡಚಣೆ ಆಗಿದೆ. ಹೀಗಾಗಿ ದೇಶದಲ್ಲಿ ಮುಂಬರುವ ದಿನಗಳಲ್ಲಿ ಅಡುಗೆಎಣ್ಣೆ ಬೆಲೆಯೇರಿಕೆ ಆಗುವ ಸಂಭವ ಇದೆ. ವಿಶೇಷವಾಗಿ ಸೂರ್ಯಕಾಂತಿ ಎಣ್ಣೆ ದರ ಹೆಚ್ಚಳವಾಗಲಿದೆ ಎಂದು ವರ್ತಕ ವಲಯ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಬಳಕೆಯಾಗುವ ಸೂರ್ಯಕಾಂತಿ ಎಣ್ಣೆಯಲ್ಲಿ ಶೇ. 60ರಷ್ಟು ಆಮದಾಗುತ್ತಿದೆ.
ತಾಸಿಗೆ ಏಳೆಂಟು ಲಕ್ಷ ರೂ. ಖರ್ಚು!: ಯೂಕ್ರೇನ್ನಿಂದ ಭಾರತೀಯರನ್ನು ಕರೆತರುತ್ತಿರುವ ಏರ್ ಇಂಡಿಯಾದ ವಿಶೇಷ ವಿಮಾನದ ಒಂದು ತಾಸಿನ ಕಾರ್ಯಾಚರಣೆಗೆ ಏಳೆಂಟು ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಒಂದು ವಿಮಾನ ಭಾರತದಿಂದ ಹೋಗಿಬರಲು ಸರಾಸರಿ 1.10 ಕೋಟಿ ರೂಪಾಯಿ ಖರ್ಚಾಗುತ್ತದೆ ಎಂದು ಮೂಲಗಳು ಹೇಳಿವೆ. ಏರ್ ಇಂಡಿಯಾದ ಬೋಯಿಂಗ್ 787 ವಿಮಾನವನ್ನು (ಡ್ರೀಮ್ೈನರ್) 'ಆಪರೇಷನ್ ಗಂಗಾ'ಗೆ ಬಳಕೆ ಮಾಡಲಾಗುತ್ತಿದೆ. ಇದು 250 ಆಸನದ ಸಾಮರ್ಥ್ಯದ ದೊಡ್ಡ ವಿಮಾನ ಆಗಿದೆ.
ತುರ್ತು ರೈಲು ವ್ಯವಸ್ಥೆ: ವಿದೇಶಿಯರು ಸೇರಿ ಸಂಕಷ್ಟದ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಯೂಕ್ರೇನ್ ರೈಲ್ವೆ ಹೆಚ್ಚುವರಿಯಾಗಿ ತುರ್ತು ರೈಲುಗಳ ಸಂಚಾರಕ್ಕೆ ಆದೇಶಿಸಿದೆ. ಉಚಿತ ಪ್ರಯಾಣದ ಈ ರೈಲುಗಳಲ್ಲಿ ಭಾರತೀಯರು ಸುರಕ್ಷಿತ ಸ್ಥಳಗಳಿಗೆ ತೆರಳಬಹುದಾಗಿದೆ. ವಿಶೇಷವಾಗಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಇರುವವರು ಪಶ್ಚಿಮ ಭಾಗಕ್ಕೆ ತೆರಳಬೇಕು ಎಂದು ಭಾರತ ಸಲಹೆ ನೀಡಿದೆ.